ಇಂಟ್ರೊ- ರಾಜ್ಯ ಹೆದ್ದಾರಿಗಳ ಬದಿಯಲ್ಲಿ ಡಾಬಾ ಎಂದು ಬೋರ್ಡು ತಗುಲಿಸಿಕೊಂಡ ಎಲ್ಲ ಖಾನಾವಳಿಗಳು ನಿಜಕ್ಕೂ ಡಾಬಾಗಳಾಗಿರುವುದಿಲ್ಲ ಎನ್ನುವುದು “ಕಹಿ’ ಸಂಗತಿ. ಹೀಗಿದ್ದರೂ ಡಾಬಾಗಳತ್ತ ನಮ್ಮ ಆಕರ್ಷಣೆ ಕಡಿಮೆಯಾಗಿಲ್ಲ. ಡಾಬಾ ಬೋರ್ಡು ಕಂಡ ತಕ್ಷಣ ಏನಾದರಾಗಲಿ, ರುಚಿ ಪರೀಕ್ಷಿಸಿ ನೋಡಿಯೇಬಿಡೋಣ ಎಂದು ನಾಲಗೆಗೆ ಮನಸ್ಸು ಹೇಳುತ್ತದೆ. ಡಾಬಾ ಹುಡುಕಾಟಕ್ಕೆ ಪೂರ್ಣವಿರಾಮ ನೀಡುವಂತೆ ಬೆಂಗಳೂರಿನಲ್ಲಿ ಒಂದು “ಡಾಬಾ’ ಹೋಟೆಲ್ ಪ್ರಾರಂಭವಾಗಿದೆ.
ದೂರ ಪ್ರಯಾಣದ ಸಂದರ್ಭಗಳಲ್ಲಿ ರಸ್ತೆ ಬದಿ ಡಾಬಾಗಳನ್ನು ನೋಡಿರುತ್ತೀರಿ. ಅದರತ್ತ ಕಣ್ಣು ಹಾಯಿಸುವುದು ಮಾತ್ರವಲ್ಲದೆ ಅಲ್ಲಿ ದೊರೆಯುವ ರುಚಿಕರ ಬಿಸಿ ಬಿಸಿ ರೋಟಿ, ಚಪಾತಿ, ದಾಲ್, ಕೆನೆಭರಿತ ಲಸ್ಸಿ ಮುಂತಾದ ನಾರ್ತ್‌ಇಂಡಿಯನ್ ಖಾದ್ಯಗಳನ್ನು, ಅದರಲ್ಲೂ ಪಂಜಾಬಿ ಕೈಯಡುಗೆಯನ್ನು ನೆನೆಸಿಕೊಂಡು ಬಾಯಲ್ಲಿ ನೀರೂರಿಸಿಕೊಂಡಿರುತ್ತೀರಿ. ಆದರೆ ಈ ಆಸೆಗೆ ಮನಸೋತು ಗಾಡಿ ನಿಲ್ಲಿಸಿ ರುಚಿ ಸವಿದಾಗ ನಿಮಗೆ ನಿರಾಸೆಯಾಗುವಂತೆ ನಿಮ್ಮ ಕಲ್ಪನೆಯ ರುಚಿ ಅಲ್ಲಿ ಸಿಕ್ಕಿರುವುದಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ರಸ್ತೆ ಬದಿ ಡಾಬಾ ಎಂದು ಬೋರ್ಡು ತಗುಲಿಸಿಕೊಂಡ ಎಲ್ಲ ಖಾನಾವಳಿಗಳು ನಿಜಕ್ಕೂ ಡಾಬಾಗಳಾಗಿರುವುದಿಲ್ಲ ಎನ್ನುವ ಸಂಗತಿ.
ಹೀಗಿದ್ದರೂ ಡಾಬಾಗಳತ್ತ ನಮ್ಮ ಆಕರ್ಷಣೆ ಕಡಿಮೆಯಾಗಿಲ್ಲ. ಡಾಬಾ ಬೋರ್ಡು ಕಂಡ ತಕ್ಷಣ ಮನಸ್ಸು ಒಂದು ಕ್ಷಣ ನಾಲಗೆಗೆ ಸೋಲುತ್ತದೆ. ರುಚಿ ಪರೀಕ್ಷಿಸಿ ನೋಡಿಯೇಬಿಡೋಣ ಎಂದು ಮನಸ್ಸಾಗುತ್ತದೆ. ಬೆಂಗಳೂರಿನಲ್ಲಿ ಪಂಜಾಬಿ ಕೈಯಡುಗೆಯ ಹೆಸರು ಹೊತ್ತ ಅದೆಷ್ಟೋ ಹೋಟೆಲುಗಳು, ರೆಸ್ಟೋರೆಂಟುಗಳು ನಮಗೆ ದೊರೆಯುತ್ತವೆ. ಅವುಗಳಲ್ಲಿ ಇಂಡಿಯನ್ ಖಾದ್ಯಗಳು ವೆಸ್ಟರ್ನ್ನೊಂದಿಗೆ ಬೆರೆತು ಬೇರೆಯದೇ ರುಚಿ ನೀಡುತ್ತವೆ. ಅವು ಚೆನ್ನಾಗಿರೋದಿಲ್ಲ ಅಂತಲ್ಲ, ಆದರೆ ಗ್ರಾಹಕರು ಅಲ್ಲಿಗೆ ಬರುವುದು ಶುದ್ಧ ಭಾರತೀಯ ಖಾದ್ಯ ಸವಿಯಲಲ್ಲವೆ?
ಡಾಬಾ ಹುಡುಕಾಟಕ್ಕೆ ಪೂರ್ಣವಿರಾಮ ನೀಡುವಂತೆ ಬೆಂಗಳೂರಿನಲ್ಲಿ ಒಂದು ಡಾಬಾ ಹೋಟೆಲ್ ಪ್ರಾರಂಭವಾಗಿದೆ. ಪಂಜಾಬಿನಲ್ಲಿ ಹೈವೇ ಬದಿಯಲ್ಲಿ ತುಂಬಿರುವ ಡಾಬಾಗಳ ಮುಖ್ಯ ಗಿರಾಕಿಗಳು ಲಾರಿ ಡ್ರೈವರ್‌ಗಳು. ಲಾರಿ ಡ್ರೈವರ್‌ಗಳು ಪಕ್ಕಾ ಪಂಜಾಬಿ ದಿರಿಸಿನಲ್ಲಿ ಬಿದಿರು ಮಂಚದ ಮೇಲೆ ಆಸೀನರಾಗಿ ಅಗಲ ತಟ್ಟೆ ತುಂಬಾ ರೋಟಿ ದಾಲ್, ಲಸ್ಸಿ ಮೆಲ್ಲುವುದು ಸಾಮಾನ್ಯವಾದ ದೃಶ್ಯ. ಬೆಂಗಳೂರಿನ ಈ ಡಾಬಾ ಹೋಟೆಲ್‌ಗೆ ಬಂದರೆ ನಿಮಗೂ ಆ ಅನುಭವವಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಈ ಹೋಟೆಲ್ ಹೆಸರಿಗೆ ಮಾತ್ರ ಡಾಬಾ ಅಲ್ಲ. ತನ್ನ ಹೆಸರಿಗೆ ಅನ್ವರ್ಥವಾಗುವಂತೆ ಹೋಟೆಲಿನ ಒಳಾಂಕಾರ ಕೂಡಾ ಹೈವೇಗಳಲ್ಲಿನ ಡಾಬಾವನ್ನು ನೆನಪಿಸುತ್ತದೆ.
ಬೆಂಗಳೂರಿನ ಶಾಖೆ, ಒಮ್ಮೆಗೆ 60 ಮಂದಿ ಕೂರಬಹುದಾದಷ್ಟು ಜಾಗ ಹೊಂದಿದೆ. ಇಲ್ಲಿನ ವೆಜ್ ಮತ್ತು ನಾನ್‌ವೆಜ್ ಎರಡೂ ಪ್ರಕಾರದ ಭಕ್ಷ್ಯಗಳು ಆಹಾರಪ್ರಿಯರ ಬಾಯಲ್ಲಿ ನೀರೂರಿಸುವುದು ಖಂಡಿತ. ಇಲ್ಲಿನ ಅಡುಗೆ ಮನೆಯಲ್ಲಿ ತವಾ, ತಂದೂರ್ ಮತ್ತು ಪಟಿಯಾಲ ಎಂದು ಪ್ರತ್ಯೇಕ ವಿಭಾಗಗಳೇ ಇವೆ. ಹಾಗಾಗಿ ಇಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಅವರ ಬೇಡಿಕೆಯನುಸಾರವಾಗಿ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಪಾಲಕ್ ಪನ್ನೀರ್ ಕಿ ಸೀಖ್, ಡಾಬೆ ದಿ ಆಲೂ ಗೋಬಿ, ಚಿಟ್ಟಾ ಬಟರ್ ಚಿಕನ್, ಅಮೃತ್‌ಸರೀ ಕುಕ್ಕಡ್, ಮಿಸ್ಸೀ ತಂದೂರಿ ಪರಾಠಾ, ತಂದೂರಿ ಮಟನ್ ಚಾಪ್ಸ್, ಢಾಬಾ ಪ್ರಾನ್ಸ್, ಡಾಬಾ ದಾಲ್ ಇಲ್ಲಿನ ವಿಶೇಷಗಳಲ್ಲಿ ಕೆಲವು.
ಯಾವ ಸಾಂಪ್ರದಾಯಿಕ ಡಾಬಾಗಳಲ್ಲೂ ಕೊನೆಯಲ್ಲಿ ಪಾನವಿಲ್ಲದೆ ಊಟ ಸಮಾರಾಧನೆ ಪೂರ್ತಿಯಾಗದು. ಡಾಬಾ ಹೋಟೆಲಲ್ಲೂ ಸಹ ಗ್ರಾಹಕರನ್ನು ತಣಿಸಲು ಅನೇಕ ಬಗೆಯ ಶರಬತ್ತು ಪಾನೀಯಗಳು ಲಭ್ಯ ಇವೆ. ತೂಫಾನ್, ಸೋಮ್‌ರಸ್, ಬಸಂತಿ, ಲಾಲ್ ಪರಿ ಅನ್ನೂ ಅನೇಕ ವಿಭಿನ್ನ ರುಚಿಯ ಪಾನೀಯಗಳ ರುಚಿ, ಗ್ರಾಹಕರಿಗಾಗಿ ಕಾದಿದೆ.
ಎಲ್ಲಿ?: #618, ಚಿಕ್ಕೊ ಸ್ಟೋರ್ ಮೇಲ್ಭಾಗ, ಎರಡನೇ ಮಹಡಿ, 12ನೇ ಮುಖ್ಯ ರಸ್ತೆ, ಇಂದಿರಾನಗರ
ಹೈವೇಗಳಲ್ಲಿನ ಈ ಪಂಜಾಬಿ ಅಡುಗೆ ಮನೆಯನ್ನು ಮೆಟ್ರೊಪಾಲಿಟನ್ ಮಂದಿಗೆ ಪರಿಚಯಿಸುವ ಉದ್ದೇಶದಿಂದ ಈ ಡಾಬಾ ಕಾನ್ಸೆಪ್ಟನ್ನು ಪ್ರಾರಂಭಿಸಿದೆವು ಎನ್ನುವುದು ಹೋಟೆಲ್ ಮಾಲೀಕರಾದ ರಾಹುಲ್ ಖನ್ನಾರ ಮಾತು. ಈ ಡಾಬಾವನ್ನು ಕ್ಲಾರಿಡ್ಜಸ್ ಎಂಬ ಸಂಸ್ಥೆ ನಡೆಸುತ್ತಿದೆ. ಇವರದ್ದು ಭಾರತದಲ್ಲಿ ಬೆಂಗಳೂರನ್ನು ಹೊರತುಪಡಿಸಿ ದೆಹಲಿ, ಚೆನ್ನೈ, ಗುರ್‌ಗಾಂವ್, ಹೈದರಾಬಾದ್‌ನಲ್ಲಿ ಶಾಖೆಗಳಿವೆ. ಇವರ ಮೊದಲ ಡಾಬಾ ಹೋಟೆಲ್ ತೆರೆದಿದ್ದು 25 ವರ್ಷಗಳ ಹಿಂದೆ ದೆಹಲಿಯಲ್ಲಿ.
– ಹವನ