ಮುಂಬೈ: ಕೆ.ಎಲ್.ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಶಾಪಮುಕ್ತಗೊಂಡಿದೆ. ಅತ್ಯುತ್ತಮವಾಗಿ ಆಡಿಯೂ ಕಡೆಯಕ್ಷಣದಲ್ಲಿ ಸೋಲುವ ದುಸ್ಥಿತಿಯಿಂದ ಹೊರಬಂದಿದೆ. ಈ ಬಾರಿಯ ಐಪಿಎಲ್‌ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಕಡೆಯ ಎಸೆತದವರೆಗೆ ಹೋರಾಡಿ 4 ರನ್‌ಗಳಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿದೆ.
ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟಿಗೆ 221 ರನ್ ಸೂರೆಗೈದಿತು. ಇದರೊಂದಿಗೆ ಈ ಕೂಟದಲ್ಲಿ ಇನ್ನೂರರ ಗಡಿ ದಾಟಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದನ್ನು ಬೆನ್ನತ್ತಿದ ರಾಜಸ್ಥಾನ; 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿತು.
ಸ್ಯಾಮ್ಸನ್ ಅಮೋಘ ಪ್ರತಿಹೋರಾಟ: ರನ್ ಬೆನ್ನತ್ತುವ ವೇಳೆ ಪಂಜಾಬ್ ತಂಡವನ್ನು ಏಕಾಂಗಿಯಾಗಿ ಸಂಜು ಸ್ಯಾಮ್ಸನ್ ಹೆದರಿಸಿದ್ದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಚಡಪಡಿಸುತ್ತಿದ್ದ ಆ ತಂಡದ ಪರ ಹೋರಾಡಿದ ಅವರು 63 ಎಸೆತದಲ್ಲಿ 12 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 119 ರನ್ ಗಳಿಸಿದರು. ಅವರ ಆಟ ನೋಡಿದಾಗ ರಾಜಸ್ಥಾನ ಗೆಲ್ಲುವುದು ಖಾತ್ರಿ ಎಂದು ಲೆಕ್ಕ ಹಾಕಲಾಗಿತ್ತು. ಆದರೆ ಕಡೆಯ ಓವರ್‌ನಲ್ಲಿ ಪೂರ್ಣ ನಿಯಂತ್ರಣ ಸಾಧಿಸಿದ ಅರ್ಷದೀಪ್ ಸಿಂಗ್, ಕಡೆಯ ಎಸೆತದಲ್ಲಿ ಸ್ಯಾಮ್ಸನ್ ವಿಕೆಟ್ ಪಡೆದು ಪಂಜಾಬನ್ನು ಗೆಲ್ಲಿಸಿದರು. ಅವರು ಮೂರು ವಿಕೆಟ್ ಪಡೆದರು. ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು.
ಸಿಡಿದ ರಾಹುಲ್, ಹೂಡಾ: ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ರಾಹುಲ್ ಕ್ರೀಸ್ ಆಕ್ರಮಿಸಿಕೊಂಡು ನಿಂತರೆ, ಇನ್ನೊಂದೆಡೆ ಹರ್ಯಾಣದ ಬಿಗ್ ಹಿಟ್ಟರ್ ದೀಪಕ್ ಹೂಡಾ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಮುನ್ನುಗ್ಗಿ ಹೋದರು. ರಾಜಸ್ಥಾನ್ ಬೌಲರ್‌ಗಳ ಮೇಲೆರಗಿದ ಅವರು ಕೇವಲ 28 ಎಸೆತಗಳಿಂದ 64 ರನ್ ಬಾರಿಸಿದರು. ಸಿಡಿಸಿದ್ದು 4 ಫೋರ್, 6 ಸಿಕ್ಸರ್. ರಾಹುಲ್-ಹೂಡಾ 3ನೇ ವಿಕೆಟಿಗೆ ಕೇವಲ 7.4 ಓವರ್‌ಗಳಿಂದ 105 ರನ್ ಸೂರೆಗೈದು ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಅಂತಿಮ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಕೆ.ಎಲ್. ರಾಹುಲ್ ಶತಕದ ನಿರೀಕ್ಷೆ ಮೂಡಿಸಿದರು. ಆದರೆ ಸಕಾರಿಯ ಇದಕ್ಕೆ ಅಡ್ಡಗಾಲಿಕ್ಕಿದರು. ರಾಹುಲ್ 91 ರನ್ ಗಳಿಸಿ ವಾಪಸಾಗಬೇಕಾಯಿತು. 50 ಎಸೆತಗಳ ಈ ಆಕರ್ಷಕ ಇನಿಂಗ್ಸ್‌ನಲ್ಲಿ 7 ಬೌಂಡರಿ, 5 ಸಿಕ್ಸರ್ ಒಳಗೊಂಡಿತ್ತು.
ಎಂದಿನಂತೆ ಕರ್ನಾಟಕದ ಜೋಡಿ ಪಂಜಾಬ್ ಇನಿಂಗ್ಸ್ ಆರಂಭಿಸಿತು. ಆದರೆ ಮಾಯಾಂಕ್ ಅಗರ್ವಾಲ್ (14) ಹೆಚ್ಚು ಹೊತ್ತು ನಿಲ್ಲಲಿಲ್ಲ. 3ನೇ ಓವರ್‌ನಲ್ಲೇ ಸಕಾರಿಯ ಈ ವಿಕೆಟ್ ಉಡಾಯಿಸಿದರು. ದ್ವಿತೀಯ ವಿಕೆಟಿಗೆ ಜತೆಗೂಡಿದ ರಾಹುಲ್-ಗೇಲ್ ಅಬ್ಬರದ ಬ್ಯಾಟಿಂಗಿಗೆ ಮುಂದಾದರು. 7.1 ಓವರ್‌ಗಳ ಜತೆಯಾಟ ನಡೆಸಿ 67 ರನ್ ಒಟ್ಟುಗೂಡಿಸಿದರು. ಇದರಲ್ಲಿ ಗೇಲ್ ಪಾಲು 40 ರನ್. ಸ್ಫೋಟಕ ಹೊಡೆತಗಳಿಗೆ ಮುಂದಾದ ಗೇಲ್ 28 ಎಸೆತ ಎದುರಿಸಿ, 4 ಫೋರ್ ಹಾಗೂ 2 ಸಿಕ್ಸರ್ ಬಾರಿಸಿದರು.
ಪಂಜಾಬ್ ಪರ ಆಡಿದ ಕಳೆದ ಮೂರೂ ಋತುಗಳ ಮೊದಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಕ್ರಿಸ್ ಗೇಲ್ (63, 79 ಮತ್ತು 53) ಇಲ್ಲಿ ಈ ಅವಕಾಶ ತಪ್ಪಿಸಿಕೊಂಡರು. 7ನೇ ಬೌಲರ್ ರೂಪದಲ್ಲಿ ಬೌಲಿಂಗಿಗೆ ಇಳಿದ ರಿಯಾನ್ ಪರಾಗ್ ಈ ಬಹುಮೂಲ್ಯ ವಿಕೆಟ್ ಕಿತ್ತರು.
ನಿಕೋಲಸ್ ಪೂರನ್ ಮತ್ತು ಜೈ ರಿಚಡ್ಸìನ್ ಖಾತೆ ತೆರೆಯಲು ವಿಫಲರಾದರು. ಉಳಿದೆಲ್ಲ ಬೌಲರ್ ದುಬಾರಿಯಾದರೆ ಎಡಗೈ ಮಧ್ಯಮ ವೇಗಿ ಸಕಾರಿಯ 31 ರನ್ನಿಗೆ 3 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು.
ಸಂಕ್ಷಿಪ್ತ ಸ್ಕೋರ್: ಪಂಜಾಬ್ 20 ಓವರ್, 221/6
(ಕೆ.ಎಲ್.ರಾಹುಲ್ 91, ದೀಪಕ್ ಹೂಡಾ 64, ಚೇತನ್ ಸಕಾರಿಯ 31ಕ್ಕೆ 3).
ರಾಜಸ್ಥಾನ 20 ಓವರ್, 217/7
(ಸ್ಯಾಮ್ಸನ್ 119, ಅರ್ಷದೀಪ್ 35ಕ್ಕೆ 3, ಶಮಿ 33ಕ್ಕೆ 2).