ಮೋಹಾಲಿ(ಪಂಜಾಬ್): ವಿದ್ಯುತ್ ಕಡಿತ ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಜಲಫಿರಂಗಿ ಪ್ರಯೋಗ ನಡೆಸಿ ಪ್ರತಿಭಟನಾಕಾರರನ್ನು ತಡೆದಿರುವ ಘಟನೆ ಶನಿವಾರ (ಜುಲೈ 03) ನಡೆದಿದೆ.
ಇದನ್ನೂ ಓದಿ:ಉತ್ತರಾಖಂಡ್ ನ ನೂತನ ಮುಖ್ಯಮಂತ್ರಿಯಾಗಿ ಶಾಸಕ ಪುಷ್ಕರ್ ಸಿಂಗ್ ಧಾಮಿ ಆಯ್ಕೆ
ಆಮ್ ಆದ್ಮಿ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ಭಗವಂತ್ ಮಾನ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿದ್ಯುತ್ ಕೊರತೆ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಫಾರ್ಮ್ ಹೌಸ್ ಬಳಿ ಪ್ರತಿಭಟನಾಕಾರರು ತೆರಳದಂತೆ ತಡೆಯುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು, ಅಷ್ಟೇ ಅಲ್ಲ ರಸ್ತೆಯಲ್ಲಿ ವಿವಿಧ ಹಂತಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು ಎಂದು ವರದಿ ಹೇಳಿದೆ.
ಪಕ್ಷದ ಬಾವುಟಗಳನ್ನು ಹಿಡಿದಿದ್ದ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಮೊದಲ ಹಂತದ ಬ್ಯಾರಿಕೇಡ್ ಅನ್ನು ಬಲವಂತದಿಂದ ತೆರವುಗೊಳಿಸಿ ಮುಂದೆ ಹೋದ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಜಲಫಿರಂಗಿ ಬಳಸಿರುವುದಾಗಿ ವರದಿ ತಿಳಿಸಿದೆ.