ಅಮೃತ್ ಸರ್: ಪಂಜಾಬ್ ಶಾಸಕ ಸುಖ್ ಪಾಲ್ ಸಿಂಗ್ ಖೈರಾ, ಆಮ್ ಆದ್ಮಿ ಪಕ್ಷದ ಶಾಸಕರಾದ ಜಗ್ ದೇವ್ ಸಿಂಗ್ ಕಮಾಲು ಮತ್ತು ಪಿರ್ಮಲ್ ಸಿಂಗ್ ಖಾಲ್ಸಾ ಅವರು ಗುರುವಾರ(ಜೂನ್ 03) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬರಮಾಡಿಕೊಂಡಿದ್ದರು.
ಇದನ್ನೂ ಓದಿ:ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ಲಾಸ್ಟಿಕ್ ವಸ್ತು ಮಾರಾಟಗಾರರ ಬದುಕು
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ ಎಂದು ವರದಿ ಹೇಳಿದೆ. ಪಂಜಾಬ್ ಕಾಂಗ್ರೆಸ್ ನ ಆಂತರಿಕ ಭಿನ್ನಮತದ ಕುರಿತು ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಲು ತೆರಳುವ ಮುನ್ನ ಅಮರಿಂದರ್ ಸಿಂಗ್ ಅವರು ಮೂವರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
2015ರ ಡಿಸೆಂಬರ್ ನಲ್ಲಿ ಖೈರಾ ಕಾಂಗ್ರೆಸ್ ಪಕ್ಷವನ್ನು ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ 2017ರಲ್ಲಿ ಆಪ್ ಟಿಕೆಟ್ ನಿಂದ ಭೋಲಾತ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
2019ರ ಜನವರಿಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ತಮ್ಮದೇ ಸ್ವಂತ ಪಕ್ಷ (ಪಂಜಾಬಿ ಏಕ್ತಾ ಪಾರ್ಟಿ) ವನ್ನು ಸ್ಥಾಪಿಸಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಮುಂಬರುವ 2022ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.