ಚಂಡೀಗಢ: ಪಂಜಾಬ್‌ನ ವಿಧಾನಸಭಾ ಚುನಾವಣೆಯಲ್ಲಿ ಬಧೌರ್ ಕ್ಷೇತ್ರದಲ್ಲಿ ಎಎಪಿಯಿಂದ ಸ್ಪರ್ಧಿಸಿ, ಸಿಎಂ ಚರಣ್‌ಜಿತ್ ಛನ್ನಿ ಅವರನ್ನೇ ಸೋಲಿಸಿರುವ ಲಭ್ ಸಿಂಗ್ ಉಗೋಕೆ ಅವರ ತಾಯಿ ಬಲದೇವಿ ಕೌರ್, ಊರಿನ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ವಿಶೇಷವೆಂದರೆ ಮಗ ಶಾಸಕನಾಗಿ ಆಯ್ಕೆಯಾದ ನಂತರ ಬಲದೇವಿ ಕೆಲಸ ಮುಂದುವರಿಸಿದ್ದಾರೆ.
“ನನ್ನ ಮಗನೂ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ. ಹಲವಾರು ವರ್ಷಗಳಿಂದ ನಾನು ಈ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದೇನೆ. ನನ್ನ ಮಗ ಗೆದ್ದಿದ್ದು ಪೊರಕೆ ಚಿಹ್ನೆಯಿರುವ ಎಎಪಿಯಿಂದ. ಹಾಗಾಗಿ ಈ ಪೊರಕೆ ನನ್ನ ಜೀವನದಲ್ಲಿ ಅತಿ ಮುಖ್ಯ. ನಮ್ಮ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಸ್ಪರ್ಧಿಸಿದ್ದರೂ ನನ್ನ ಮಗ ಗೆದ್ದೇ ಗೆಲ್ಲುತ್ತಾನೆ ಎನ್ನುವ ವಿಶ್ವಾಸ ನಮಗಿತ್ತು’ ಎನ್ನುತ್ತಾರೆ ಶಾಸಕರ ತಾಯಿ ಬಲದೇವಿ.
ಇದನ್ನೂ ಓದಿ:ಮಧ್ಯಪ್ರದೇಶ: ನಾಲ್ವರು ನಿಷೇಧಿತ ಜೆಎಂಬಿ ಉಗ್ರರ ಬಂಧನ
ಲಭ್ ಸಿಂಗ್ ಅವರ ತಂದೆ ದರ್ಶನ್ ಸಿಂಗ್ ಅವರು ಕೂಲಿ ಕೆಲಸ ಮಾಡುತ್ತಿದ್ದಾರೆ. ಮಗ ಶಾಸಕನಾದ ಎಂದ ಮಾತ್ರಕ್ಕೆ ನಮ್ಮ ಜೀವನವೇನು ಬದಲಾಗಿಲ್ಲ. ನನ್ನ ಮಗ ಬರೀ ಕುಟುಂಬವನ್ನಷ್ಟೇ ಅಲ್ಲದೆ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಲಿದ್ದಾನೆ ಎಂದು ಅವರು ಹೇಳಿದ್ದಾರೆ.
ಲಭ್ ಸಿಂಗ್ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಛನ್ನಿ ಅವರನ್ನು 37,550 ಮತಗಳ ಅಂತರದಿಂದ ಸೋಲಿಸಿದ್ದಾರೆ.