ದುಬೈ: ಇಲ್ಲಿ ಗುರುವಾರ ನಡೆದ 53ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ರಾಹುಲ್ ಪಡೆಗೆ ಪ್ಲೇ ಆಫ್ ಪ್ರವೇಶಿಸಬೇಕಾದರೆ ಉಳಿದ ಪಂದ್ಯಗಳ ಫಲಿತಾಂಶಗಳನ್ನು ಲೆಕ್ಕಾಚಾರ ಹಾಕಿ ನೋಡಬೇಕಾಗಿದೆ.ಮುಂಬೈ, ಕೆಕೆಆರ್, ರಾಜಸ್ಥಾನ್ ಮತ್ತು ಪಂಜಾಬ್ ನಡುವೆ ಪ್ಲೇ ಆಫ್ ಪೈಪೋಟಿ ಏರ್ಪಟ್ಟಿದೆ.
ಲೀಗ್ ಹಂತದ 3 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಇಂದು ಕೆಕೆಆರ್ ಮತ್ತು ರಾಜಸ್ಥಾನ್ ಸೆಣಸಲಿವೆ. ನಾಳಿನ 2 ಪಂದ್ಯಗಳಲ್ಲಿ ಹೈದರಾಬಾದ್ ಎದುರು ಮುಂಬೈ ಕಣಕ್ಕಿಳಿದರೆ ಇನ್ನೊಂದು ಪಂದ್ಯದಲ್ಲಿ ಆರ್ ಸಿಬಿ ಮತ್ತು ಅಗ್ರ ಸ್ಥಾನದಲ್ಲಿರುವ ಡೆಲ್ಲಿ ಮುಖಾಮುಖಿ ಯಾಗಲಿವೆ. ಕೆಕೆಆರ್, ಮುಂಬೈ, ರಾಜಸ್ಥಾನ್ ಮತ್ತು ಪಂಜಾಬ್ ಪೈಕಿ ಯಾವ ತಂಡ ಪ್ಲೇ ಆಫ್ ಪ್ರವೇಶಿಸಲಿದೆ ಎನ್ನುವ ಕುತೂಹಲ ಐಪಿಎಲ್ ಅಭಿಮಾನಿಗಳದ್ದಾಗಿದೆ.
ರಾಜಸ್ಥಾನ್ ಕೋಲ್ಕತಾವನ್ನು ಸೋಲಿಸಬೇಕು,ಜತೆಗೆ ಮುಂಬೈಯನ್ನು ಹೈದರಾಬಾದ್ ಪರಾಭವಗೊಳಿಸಬೇಕು. ಆಗಷ್ಟೇ ಪಂಜಾಬ್ “ಕಿಂಗ್’ ಎನಿಸಲಿದೆ!
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುರೀ ಬೆನ್ನಟ್ಟಿದ ರಾಹುಲ್ ಪಡೆ 13 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಭರ್ಜರಿ ಆಟವಾಡಿದ ರಾಹುಲ್ 42 ಎಸೆತಗಳಲ್ಲಿ 98 ರನ್ ಗಳಿಸಿ ಅಜೇಯರಾಗಿ ಉಳಿದರು.
ಚೆನ್ನೈ ಪರ ಡು ಫ್ಲೆಸಿಸ್ ಗರಿಷ್ಠ 76 ರನ್ ಗಳಿಸಿದರು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 12 ,ನಾಯಕ ಧೋನಿ 12 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಜಡೇಜಾ 15 ರನ್ ಕೊಡುಗೆ ನೀಡಿದರು.