ಅಮೃತಸರ : ಜನರು ಜಿಎಸ್‌ಟಿ ಕುರಿತಾಗಿನ ಗೊಂದಲದಲ್ಲಿರುವ ವೇಳೆಯಲ್ಲೇ ಕಾಂಗ್ರೆಸ್ ಆಡಳಿತವಿರುವ ಪಂಜಾಬ್‌ನಲ್ಲಿ ದೇಶದಲ್ಲೇ ಮೊದಲು ಎನ್ನುವ ರೀತಿಯಲ್ಲಿ ಸಾಕು ಪ್ರಾಣಿಗಳ ಮೇಲೂ ತೆರಿಗೆ ಹೇರಲು ಸಿದ್ಧತೆ ನಡೆಸಲಾಗಿದೆ.
ರಾಜ್ಯ ಸರ್ಕಾರ ನೀಡಿದ ಇತ್ತೀಚಿಗಿನ ಸೂಚನೆಯ ಪ್ರಕಾರ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು , ಕುರಿ, ಆಡು, ಹಸು,ಎಮ್ಮೆಗಳ ಮೇಲೆ 250 ರೂಪಾಯಿಯಿಂದ 500 ರೂಪಾಯಿಯ ವರೆಗೆ ವಾರ್ಷಿಕ ತೆರಿಗೆ ಹೇರಲು ನಿರ್ಧರಿಸಲಾಗಿದೆ. ಸಚಿವ ನವಜೋತ್ ಸಿಂಗ್ ಸಿಧು ಅವರ ನೇತೃತ್ವದ ಸ್ಥಳೀಯಾಡಳಿತ ಸಂಸ್ಥೆಯೊಂದು ಹೊರಡಿಸಿದ ಪ್ರಕಟಣೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿದೆ.
ಹೊಸ ಕಾನೂನಿನ ಪ್ರಕಾರ ಇನ್ನು ಮುಂದೆ ಪಂಜಾಬ್‌ನಲ್ಲಿ ಸಾಕು ಪ್ರಾಣಿಗಳನ್ನು ಸಾಕುವವರು ಕಡ್ಡಾಯವಾಗಿ ಲೈಸನ್ಸ್ ಪಡೆಯಲೇ ಬೇಕಾಗಿದೆ ಮತ್ತು ಪ್ರತೀ ವರ್ಷ ನವೀಕರಣ ಗೊಳಿಸಬೇಕು.
ಪಂಜಾಬ್ ನಿವಾಸಿಗಳು ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ,ಹಂದಿ, ಕುರಿ, ಜಿಂಕೆ ಇತ್ಯಾದಿಗಳಿಗೆ 250 ರೂಪಾಯಿ ತೆರಿಗೆ ಕಟ್ಟಬೇಕಾಗಿದ್ದು,ಹಸು, ಎಮ್ಮೆ, ಕುದುರೆ ಇತ್ಯಾದಿಗಳಿಗೆ 500 ರೂಪಾಯಿ ತೆರಿಗೆ ಕಟ್ಟಬೇಕಾಗಿದೆ.
ಪ್ರತಿಯೊಂದು ಪ್ರಾಣಿಗೂ ಗುರುತಿಗಾಗಿ ಬ್ರ್ಯಾಂಡಿಂಗ್ ಕೋಡ್ ಮತ್ತು ನಂಬರ್‌ಗಳನ್ನು ನೀಡಲಾಗುತ್ತಿದೆ.
ಸರ್ಕಾರದ ಈ ನಿರ್ಧಾರದ ವಿರುದ್ಧ ಜನರು ಹೋರಾಟಕ್ಕಿಳಿಯುವ ಎಲ್ಲಾ ಸಾಧ್ಯತೆಗಳಿವೆ.