ಚಂಡೀಗಢ್: ಪ್ರೇಮ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು 19 ವರ್ಷದ ಯುವತಿಯನ್ನು ಹತ್ಯೆಗೈದು ನಂತರ ಗುಟ್ಟಾಗಿ ಅಂತ್ಯಸಂಸ್ಕಾರ ನಡೆಸಿದ ಘಟನೆ ಪಂಜಾಬ್ ನ ಹೋಶಿಯಾರ್ ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ಆರೋಪದಡಿ ಐವರ ವಿರುದ್ಧ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಪೊಲೀಸರು ಮೃತ ಯುವತಿಯ ತಾಯಿ ಬಲ್ವಿಂದರ್, ಚಿಕ್ಕಪ್ಪ ಸಾದೇವ್, ಸಹೋದರ ಗುರುದೀಪ್ ಸಿಂಗ್(ಪಂಜಾಬ್ ಪೊಲೀಸ್ ಇಲಾಖೆಯ ಉದ್ಯೋಗಿ, ಅಲ್ಲದೇ ಸಿಎಂ ಭದ್ರತಾದಳದಲ್ಲಿ ಕಾರ್ಯನಿರ್ವಹಿಸಲು ನಿಯೋಜನೆಗೊಂಡಿದ್ದ) ನನ್ನು ಬಂಧಿಸಿದ್ದಾರೆ ಎಂದು ವರದಿ ಹೇಳಿದೆ.
ಸಂತ್ರಸ್ತೆಯ ತಾಯಿ ಬಲ್ವಿಂದರ್ ಕೌರ್ ಏಪ್ರಿಲ್ 22ರಂದು ಠಾಣೆಗೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಳು. ನನ್ನ ಮಗಳು ಜಸ್ಪ್ರೀತ್ ಸಿಂಗ್ ನಮಗೆ ಯಾವುದೇ ಮಾಹಿತಿ ನೀಡದೆ ಮನೆ ಬಿಟ್ಟು ಹೋಗಿದ್ದಾಳೆ. ನನ್ನ ಮಗಳ ನಾಪತ್ತೆಗೆ ಅಮಾನ್ ಪ್ರೀತ್ ಸಿಂಗ್ ಅಲಿಯಾಸ್ ಅಮಾನ್ ಎಂಬಾತನೇ ಹೊಣೆಗಾರ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ದೂರು ನೀಡಿ ಒಂದು ದಿನದ ನಂತರ ಬಲ್ವಿಂದರ್ ಕೌರ್ ಪೊಲೀಸರಿಗೆ ಕರೆ ಮಾಡಿ, ನನ್ನ ಮಗಳು ಗಾರ್ ಶಂಕರ್ ರೈಲ್ವೆ ನಿಲ್ದಾಣದ ಸಮೀಪ ಪತ್ತೆಯಾಗಿದ್ದು, ಆಕೆಯನ್ನು ಮನೆಗೆ ಕರೆತಂದಿರುವುದಾಗಿ ತಿಳಿಸಿದ್ದಳು. ಪೊಲೀಸ್ ತನಿಖೆ ವೇಳೆ ನಿಜಾಂಶ ಪತ್ತೆಯಾಗಿತ್ತು.
ಮೃತ ಜಸ್ಪ್ರೀತ್ ಮತ್ತು ಅಮಾನ್ ನಡುವೆ ಪ್ರೇಮಾಂಕುರವಾಗಿತ್ತು. ಆಕೆ ಅಮಾನ್ ಮನೆಗೆ ಹೋಗಿದ್ದನ್ನು ಕುಟುಂಬದ ಸದಸ್ಯರು ಪತ್ತೆಹಚ್ಚಿದ್ದರು. ನಂತರ ಆಕೆಯನ್ನು ಸ್ಥಳೀಯ ಪಂಚಾಯತ್ ನವರ ಮಧ್ಯಪ್ರವೇಶದ ಮಾತುಕತೆ ಮೂಲಕ ಮನೆಗೆ ಕರೆದುಕೊಂಡು ಬಂದಿದ್ದರು.
ಮೃತ ಯುವತಿಯ ತಾಯಿ, ಚಿಕ್ಕಪ್ಪ ಮತ್ತು ಸಹೋದರ ಕೊಲೆ ಮಾಡಿರುವುದನ್ನು ತಪ್ಪೊಪ್ಪಿಕೊಂಡಿದ್ದರು. ಏ.25ರಂದು ರಾತ್ರಿ ಮಗಳಿಗೆ ನಿದ್ದೆ ಮಾತ್ರೆಯನ್ನು ಕೊಟ್ಟಿರುವುದಾಗಿ ತಾಯಿ ತಿಳಿಸಿದ್ದಾಳೆ. ನಂತರ ಆರೋಪಿಗಳಾದದ ಶಿವರಾಜ್ ಮತ್ತು ಲಾಲಾ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದರು. ಬಳಿಕ ಸತ್ಯದೇವ್, ಗುರು ದೀಪ್ ಹಾಗೂ ಮತ್ತಿತರರು ಸೇರಿ ಶವವನ್ನು ಸುಟ್ಟುಹಾಕಿರುವುದಾಗಿ ಹೋಶಿಯಾರ್ ಪುರ್ ಠಾಣಾಧಿಕಾರಿ ಇಕ್ಬಾಲ್ ಸಿಂಗ್ ತಿಳಿಸಿದ್ದಾರೆ.