Advertisement

ಧರ್ಮಗ್ರಂಥಗಳಿಗೆ ಅವಮಾನ ಮಾಡಿದರೆ ಜೀವಾವಧಿ ಶಿಕ್ಷೆ

07:10 AM Aug 24, 2018 | Team Udayavani |

ಚಂಡೀಗಡ: ಇನ್ನು ಮುಂದೆ ಪಂಜಾಬ್‌ನಲ್ಲಿ ಯಾವುದೇ ಧರ್ಮಗ್ರಂಥವನ್ನು ಅವಹೇಳನ ಅಥವಾ ಅವಮಾನ ಮಾಡಿದಲ್ಲಿ ಜೀವಾವಧಿ ಶಿಕ್ಷೆ ಗ್ಯಾರಂಟಿ. ಈ ಸಂಬಂಧ ಅಲ್ಲಿನ ಅಮರೀಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಹೊಸ ಕಾನೂನು ತರಲು ಮುಂದಾಗಿದೆ. ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆಯನ್ನೂ ನೀಡಲಾಗಿದ್ದು, ಇನ್ನು ರಾಜ್ಯ ವಿಧಾನಸಭೆಯಲ್ಲಿ ಮಾತ್ರ ಅನುಮೋದನೆ ಸಿಗಬೇಕಿದೆ. ಸ್ವತಃ ಅಮರೀಂದರ್‌ ಸಿಂಗ್‌ ಅವರೇ ಈ ಬಗ್ಗೆ ಟ್ವೀಟ್‌ ಮಾಡಿದ್ದು, ರಾಜ್ಯದಲ್ಲಿ ಸರ್ವಧರ್ಮ ಸಮನ್ವಯ ಕಾಯ್ದುಕೊಳ್ಳುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಪಡೆಯಲಾಗಿದ್ದು, ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಿದ್ದೇವೆ ಎಂದಿದ್ದಾರೆ.

Advertisement

ಜು. 25ರಂದು ನಿವೃತ್ತ ನ್ಯಾಯಮೂರ್ತಿ ರಂಜಿತ್‌ ಸಿಂಗ್‌ ನೇತೃತ್ವದ ಸಮಿತಿ ಈ ಬಗ್ಗೆ ವರದಿ ನೀಡಿದೆ. ಇದರ ಅನ್ವಯವೇ ಭಾರತೀಯ ದಂಡ ಸಂಹಿತೆಯಲ್ಲಿ ತಿದ್ದುಪಡಿ ಮಾಡಿ, ಧರ್ಮಗ್ರಂಥಗಳ ಅವಹೇಳನ ಮಾಡಿದವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಸೇರ್ಪಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ವಿಶೇಷವೆಂದರೆ ಹಿಂದಿನ ಎಸ್‌ಎಡಿ-ಬಿಜೆಪಿ ಸರಕಾರವು ಐಆರ್‌ಪಿಸಿ ಮತ್ತು ಐಪಿಸಿಯಲ್ಲಿ ತಿದ್ದುಪಡಿ ತಂದು, ಸಿಕ್ಖರ ಪವಿತ್ರ ಗ್ರಂಥ ‘ಗುರು ಗ್ರಂಥ್‌ ಸಾಹೇಬ್‌’ ಅನ್ನು ಅವಮಾನ ಮಾಡಿದಲ್ಲಿ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ರೂಪಿಸಿತ್ತು. ಆದರೆ, ಇದೀಗ ಕಾಂಗ್ರೆಸ್‌ ಸರಕಾರ, ಇದೇ ತಿದ್ದುಪಡಿಯನ್ನು ಜಾತ್ಯತೀತಗೊಳಿಸಿದ್ದು, ಎಲ್ಲ ಧರ್ಮಗ್ರಂಥಗಳಿಗೂ ಅನ್ವಯ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next