Advertisement

ಪಿ.ಎಂ.ಸಿ. ಬ್ಯಾಂಕಿಗೆ 4300 ಕೋಟಿ ರೂ. ನಷ್ಟ: ಮುಂಬಯಿ ಪೊಲೀಸರಿಂದ ಪ್ರಕರಣ ದಾಖಲು

10:02 AM Oct 02, 2019 | Hari Prasad |

ಮುಂಬಯಿ: ಮುಂಬಯಿ ಪೊಲೀಸ್ ಆರ್ಥಿಕ ಅಪರಾಧಗಳ ಘಟಕವು ಭಾರತೀಯ ರಿಸರ್ವ್ ಬ್ಯಾಂಕ್ ನ ನಿರ್ದೇಶನದನ್ವಯ ಸೋಮವಾರದಂದು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿ.ಎಂ.ಸಿ.) ಮತ್ತು ಹೌಸಿಂಗ್ ಡೆವಲಪ್ ಮೆಂಟ್ ಆ್ಯಂಡ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ನ ಉನ್ನತ ಆಡಳಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

Advertisement

ಆರ್.ಬಿ.ಐ.ನ ಆಡಳಿತಾಧಿಕಾರಿ ಜಸ್ಬೀರ್ ಸಿಂಗ್ ಮತ್ತಾ ಅವರು ಈ ಪ್ರಕರಣವನ್ನು ದಾಖಲಿಸಿದ್ದಾರೆ. 2008 ರಿಂದ ಆಗಸ್ಟ್ 2019ರವರೆಗೆ ನಿರ್ಧಿಷ್ಟ ಕಂಪೆನಿಗೆ ಕೊಡಮಾಡಿದ್ದ ಸಾಲ ಮರುಪಾವತಿಯಾಗಿಲ್ಲ ಮತ್ತು ಅದು ಎನ್.ಪಿ.ಎ. ಆಗಿ ಪರಿವರ್ತಿತವಾಗಿತ್ತು ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಮತ್ತು ಈ ಮಾಹಿತಿಗಳನ್ನು ಬ್ಯಾಂಕಿಂಗ್ ನಿಯಮಗಳಿಗೆ ಅನುಸಾರವಾಗಿ ಬಹಿರಂಗಗೊಳಿಸಲಾಗುವುದಿಲ್ಲ ಎಂದು ಅವರು ತಿಳಿಸಿದರು.

ಪಿ.ಎಂ.ಸಿ. ಬ್ಯಾಂಕ್ ಅಧಿಕಾರಿಗಳು ಸುಳ್ಳು ಸಾಲದ ಅಕೌಂಟ್ ಗಳನ್ನು ತಯಾರಿಸಿದ್ದಾರೆ ಹಾಗೂ ಆರ್.ಬಿ.ಐ.ಗೆ ಸಲ್ಲಿಸಿರುವ ವರದಿಯಲ್ಲಿ ಕಡಿಮೆ ಮೊತ್ತವನ್ನು ನಮೂದಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಬ್ಯಾಂಕಿಗೆ ಸುಮಾರು 4,355.46 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ.

ಪಿ.ಎಂ.ಸಿ. ಬ್ಯಾಂಕಿನಿಂದ ಸಾಲ ಪಡೆದುಕೊಂಡ ಸಾಲಗಾರರು ಆ ಮೊತ್ತವನ್ನು ತಮ್ಮ ಖಾಸಗಿ ಉಪಯೋಗಕ್ಕೆ ಬಳಸಿಕೊಂಡಿರುವುದೂ ಸಹ ಬೆಳಕಿಗ ಬಂದಿದೆ. ಇದರಿಂದಾಗಿ ಬ್ಯಾಂಕಿಗೆ ಭಾರೀ ಪ್ರಮಾಣದ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪಿಎಂಸಿ ಬ್ಯಾಂಕಿನ ಸಿಇಒ ಜಾಯ್ ಥಾಮಸ್, ಅಧ್ಯಕ್ಷ ವಾರೆಯಮ್ ಸಿಂಗ್ ಮತ್ತು ಇತರೇ ಬ್ಯಾಂಕ್ ಅಧಿಕಾರಿಗಳು ಹಾಗೂ HDIL ಸಮೂಹ ಸಂಸ್ಥೆಗಳ ಅಧ್ಯಕ್ಷರ ವಿರುದ್ಧ ಪ್ರಾಥಮಿಕ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Advertisement

ಪಿಎಂಸಿ ಬ್ಯಾಂಕಿನ ಅಧ್ಯಕ್ಷ ವಾರೆಯಮ್ ಸಿಂಗ್ ಅವರು 2006ರಿಂದ 2015ರವರೆಗೆ HDILನ ಆಡಳಿತ ಮಂಡಳಿಯಲ್ಲಿದ್ದರು ಮತ್ತು ಪಿಎಂಸಿ ಬ್ಯಾಂಕಿಗೆ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದರು. ಬಳಿಕ ಅವರು ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಐಪಿಸಿ ಕಾನೂನಿನ 409, 420, 465, 471, 120 (ಬಿ) ಕಲಂಗಳಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ತನಿಖೆಗೆ ಮುಂಬಯಿ ಪೊಲೀಸ್ ಆರ್ಥಿಕ ಅಪರಾಧಗಳ ಘಟಕವು ಒಂದು ವಿಶೇಷ ತನಿಖಾ ತಂಡವನ್ನು ರಚಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next