ಹೊಸದಿಲ್ಲಿ: ತೀವ್ರ ವಾಗ್ವಾದದ ವೇಳೆ ಶಿರೋಮಣಿ ಅಕಾಲಿದಳದ ಮುಖಂಡರೊಬ್ಬರು ಹಾರಿಸಿದ ಗುಂಡು ತಗುಲಿ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ (AAP) ಮುಖಂಡರೊಬ್ಬರು ಗಾಯಗೊಂಡಿದ್ದಾರೆ. ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.
ಬುಲೆಟ್ ನಿಂದ ಗಾಯಗೊಂಡ ಸ್ಥಳೀಯ ಎಎಪಿ ನಾಯಕ ಮನದೀಪ್ ಸಿಂಗ್ ಬ್ರಾರ್ ಅವರನ್ನು ಪಂಜಾಬ್‌ನ ಜಲಾಲಾಬಾದ್ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅವರ ಗಂಭೀರ ಸ್ಥಿತಿಯನ್ನು ನೋಡಿ ಹೆಚ್ಚಿನ ಚಿಕಿತ್ಸೆಗಾಗಿ ಲುಧಿಯಾನದ ಜಿಲ್ಲಾ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಅಕಾಲಿ ನಾಯಕ ವರದೇವ್ ಸಿಂಗ್ ಮಾನ್ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಜಲಾಲಾಬಾದ್ ಎಎಪಿ ಶಾಸಕ ಜಗದೀಪ್ ಕಾಂಬೋಜ್ ಗೋಲ್ಡಿ ಆರೋಪಿಸಿದ್ದಾರೆ.
ಬ್ಲಾಕ್ ಅಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿ (ಬಿಡಿಪಿಒ) ಕಚೇರಿಯ ಹೊರಗೆ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ತಿಳಿದ ಫಾಜಿಲ್ಕಾ ಹಿರಿಯ ಪೊಲೀಸ್ ಅಧಿಕಾರಿ ವರೀಂದರ್ ಸಿಂಗ್ ಬ್ರಾರ್ ಜಲಾಲಾಬಾದ್‌ಗೆ ಧಾವಿಸಿದ್ದಾರೆ.
ಮಾಜಿ ಸಂಸದ ಜೋರಾ ಸಿಂಗ್ ಮಾನ್ ಅವರ ಪುತ್ರ ವರದೇವ್ ಸಿಂಗ್ ನೋನಿ ಮಾನ್ ಅವರು ಶಾಲೆಗೆ ಸಂಬಂಧಿಸಿದ ಫೈಲ್ ಅನ್ನು ತೆರವುಗೊಳಿಸುವ ಬಗ್ಗೆ ಕೇಳಲು ಬಿಡಿಪಿಒ ಕಚೇರಿಗೆ ಬಂದಿದ್ದರು ಎಂದು ಬ್ರಾರ್ ಹೇಳಿದರು. ಬಿಡಿಪಿಓ ಅವರ ಮನವಿಯನ್ನು ನಿರಾಕರಿಸಿದ್ದರು. ಹೀಗಾಗಿ ಅಕಾಲಿ ನಾಯಕ ಮಾನ್ ಅಸಮಾಧಾನಗೊಂಡಿದ್ದು, ಕಚೇರಿಯಿಂದ ಹೊರನಡೆದರು.
ಕಚೇರಿಯ ಹೊರಗಡೆ ಅಕಾಲಿದಳ ನಾಯಕ ಮನದೀಪ್ ಸಿಂಗ್ ಬ್ರಾರ್ ಸಿಕ್ಕಿದ್ದು, ಅವರ ಜೊತೆಗೆ ಜಗಳವಾಗಿದೆ. ಈ ವೇಳೆ ಮಾನ್ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿ ಹೇಳಿದೆ.