ಬೆಂಗಳೂರು: ”ಕಾಂಗ್ರೆಸ್ ಕಾಲದಲ್ಲಿ ನಡೆಸಿ ಮರೆಮಾಚಿದ್ದ ಹಗರಣಗಳನ್ನು ಬಯಲಿಗೆಳೆಬೇಕು. ಆ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಚರ್ಚೆ ಮಾಡಿದ್ದೇವೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಾನುವಾರ ಹೇಳಿಕೆ ನೀಡಿದ್ದಾರೆ.
ಸೇವಾ ಪ್ರಾಕ್ಷಿಕ; ಬಿಜೆಪಿಯಿಂದ ಹಲವು ಸಾಮಾಜಿಕ ಯೋಜನೆಗಳು
”ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ, ಸೆಪ್ಟೆಂಬರ್ 25 ದೀನ ದಯಾಳ್ ಉಪಾಧ್ಯಾಯರ ಜನ್ಮದಿನ, ಅಕ್ಟೋಬರ್ 2 ರಂದು ಗಾಂಧಿ,ಶಾಸ್ತ್ರೀ ಜಯಂತಿ ಇರುವ ಹಿನ್ನೆಲೆ ಸೇವಾ ಪ್ರಾಕ್ಷಿಕವನ್ನು ಬಿಜೆಪಿ ಕಾರ್ಯಕರ್ತರು ಆಚರಿಸುತ್ತೇವೆ. 17 ರಂದು ರಾಷ್ಟ್ರಾದ್ಯಂತ ಯುವ ಮೋರ್ಚಾದವರು ರಕ್ತದಾನ ಮಾಡುತ್ತಾರೆ,ಆರೋಗ್ಯ ಶಿಬಿರ ಆಯೋಜಿಸುತ್ತಾರೆ.ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಿಸುವುದು,ಪ್ರತಿ ಜಿಲ್ಲೆಗೆ 75 ಕೆರೆಗಳನ್ನು ಅಭಿವೃದ್ಧಿ ಮಾಡುವುದು, ಕೆರೆ ಬಾವಿ ನದಿಗಳ ಸ್ವಚ್ಛತೆಯಲ್ಲಿ ಭಾಗಿಯಾಗಲಿದ್ದಾರೆ” ಎಂದರು.
”2025 ಕ್ಕೆ ಭಾರತ ಕ್ಷಯಮುಕ್ತರಾಗಬೇಕು ಅನ್ನೋದು ಮೋದಿಯವರ ಸಂಕಲ್ಪ, ಆದ್ದರಿಂದ ಶಾಸಕರು, ಸಂಸದರು,ಜನನಾಯಕರು 5 ಕ್ಷಯ ರೋಗಿಗಳಿಗೆ ಸಹಾಯ ಮಾಡುವುದು,ಸಾಮಾಜಿಕ ಸದ್ಭಾವನ ಯೋಜನೆ ರೂಪಿಸುವುದು ಮತ್ತು ಕಮಲ ಕ್ರೀಡಾಕೂಟದ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ, ಜನ ಸಂವಾದ ಕಾರ್ಯಕ್ರಮ, ಜನೋತ್ಸವ ಕಾರ್ಯಕ್ರಮಗಳು ಕೂಡ ಮಾಡಲು ಸಿಎಂ ಮತ್ತು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ” ಎಂದರು.
”ಕರ್ನಾಟಕದಲ್ಲಿ ಕೇಂದ್ರ ಮತ್ತು ರಾಜ್ಯದ ಯೋಜನೆಗಳ ಫಲಾನುಭವಿಗಳಿದ್ದಾರೆ.65 ರಿಂದ 70 % ಫಲಾನುಭವಿಗಳಿದ್ದಾರೆ. ಅವರನ್ನು ಸಂಪರ್ಕಿಸುವ ಸಲುವಾಗಿ ಚರ್ಚೆ ನಡೆಸಿದ್ದೇವೆ. ಬಿಜೆಪಿ ರಾಜ್ಯ ನಾಯಕರ ಪ್ರವಾಸದ ಬಗ್ಗೆ ಕೂಡ ಚರ್ಚೆ ಆಗಿದೆ. ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ” ಎಂದರು.
”ಬೆಂಗಳೂರು ಹೆಸರನ್ನು ಯಾರಿಂದಲೂ ಹಾಳು ಮಾಡುವುದಕ್ಕೆ ಆಗುವುದಿಲ್ಲ. ರಾಜಕಾಲುವೆ ಒತ್ತುವರಿ ಬಿಜೆಪಿ ಸರ್ಕಾರ ಬಂದ ಮೇಲೆ ಆಗಿದೆಯಾ? ಕೆರೆಗಳ ಒತ್ತುವರಿ ಮಾಡಿದ್ದು ಯಾರು ಎಂದು ಅವರೇ ಉತ್ತರ ಕೊಡಬೇಕು” ಎಂದು ಪ್ರಶ್ನಿಸಿದರು.
”ಜಲಧಾರೆ ಮಾಡಿದ್ದಕ್ಕೆ ಮಳೆಯಾಗಿದೆ ಎಂದು ಜೆಡಿಎಸ್‌ನವರು ಹೇಳುತ್ತಾರೆ. ಅದಕ್ಕಾಗಿ ರಾಮನಗರಕ್ಕೆ ಪ್ರೀತಿಯಿಂದ ಹೆಚ್ಚಾಗಿ ಮಳೆಬಂದಿದೆ ಅನಿಸುತ್ತದೆ” ಎಂದರು.
ರಾಜಕಾಲುವೆ ಒತ್ತುವರಿಯನ್ನು ಹೊಡೆದು ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿ,”ಹೊಡೆಯುವ ಕೆಲಸ ಪ್ರಾರಂಭವಾಗಿದೆ. ಇನ್ನೂ ಕೆಲವರು ಕೋರ್ಟ್‌ಗೆ ಹೋಗಿ ಸ್ಟೇ ಕೂಡ ತಂದಿದ್ದಾರೆ. ಒಂದೊಂದು ನಕಾಶೆಯಲ್ಲಿ ಒಂದೊಂದು ರೀತಿ ಇದೆ. ನಕಾಶೆಯಲ್ಲಿ ಕೆಲ ಗೊಂದಲವಿದೆ. ತಪ್ಪು ಮಾಡಿದವರನ್ನು ಬೆಂಬಲಿಸುವ ಕೆಲಸ ಮಾಡುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಕಾನೂನು ಬಿಟ್ಟು ಕ್ರಮ ತೆಗೆದುಕೊಳ್ಳಿ ಅನ್ನೋದೆ ಜನಾಭಿಪ್ರಾಯವಾದರೆ ಅದನ್ನೆ ಮಾಡುತ್ತೇವೆ. ಯಾವುದನ್ನೂ ಸರಿಮಾಡಲು ಸಾಧ್ಯವಿದೆಯೋ ಅದನ್ನು ಸರಕಾರ ಮಾಡುತ್ತಿದೆ.ಉಪನಗರಗಳ ನಿರ್ಮಾಣ ಮಾಡುವುದಕ್ಕೆ ಸಿಎಂ ಈಗಾಗಲೇ ಘೋಷಣೆ ಮಾಡಿದ್ದಾರೆ” ಎಂದರು.