ಸರಕಾರಿ ಅಧಿಕಾರಿಯಾದ ಆರೋಪಿ ಅಬ್ದುಲ್ ಅಜೀಜ್ ಅವರು ಕುಂದಾಪುರ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ಬಗ್ಗೆ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ ಇವರು ಮಾಹಿತಿಯನ್ನು ಸಂಗ್ರಹಿಸಿ, ದೂರು ನೀಡಿದ ಮೇರೆಗೆ ಅಂದಿನ ಮಂಗಳೂರು ಪೊಲೀಸ್ ವಿಭಾಗದ ಎಸ್.ಪಿ. ಧರ್ಮರಾಜ್ ಎ.ಜಿ. ಪ್ರಕರಣ ದಾಖಲಿಸಿದ್ದರು.
Advertisement
ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಆರೋಪಿಯ ಮನೆ ಶೋಧ ನಡೆಸಲು ಸರ್ಚ್ ವಾರೆಂಟ್ ಪಡೆದು ಎಸ್.ಪಿ. ಹಾಗೂ ಉಡುಪಿಯ ಪ್ರಭಾರ ಡಿವೈಎಸ್‌ಪಿ ಅವರು ಆರೋಪಿಯ ಮನೆ ಹಾಗೂ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲನೆ ನಡೆಸಿದ್ದರು.
ಲೋಕಾಯುಕ್ತ ಡಿವೈಎಸ್‌ಪಿ ಸದಾನಂದ ವರ್ಣೇಕರ್ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು ಆರೋಪಿ ಅಬ್ದುಲ್ ಅಜೀಜ್‌ಗೆ 1 ವರ್ಷ ಸಾದಾ ಸಜೆ ಮತ್ತು 1 ಲ.ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಸ್ತುತ ಅಬ್ದುಲ್ ಅಜೀಜ್ ಅವರು ನಿವೃತ್ತಿಯಾಗಿದ್ದಾರೆ. ಸರಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಟಿ. ವಿಜಯ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.