ಮುಜಾಫರ್‌ನಗರ್/ಕಥುವಾ:ತರಗತಿಯ ಶಿಕ್ಷಕಿ ನೀಡಿದ ಮನೆ ಕೆಲಸ ಮಾಡಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಒಂದನೇ ತರಗತಿಯ ವಿದ್ಯಾರ್ಥಿಗೆ ಆತನ ಸಹಪಾಠಿ ಏಟು ನೀಡಿದ ಪ್ರಕರಣಕ್ಕೆ ಈಗ ರಾಜಕೀಯ ಮತ್ತು ಧಾರ್ಮಿಕ ತಿರುವು ಸಿಕ್ಕಿದೆ. ಮುಜಾಫರ್‌ನಗರದ ಶಾಲೆಯ ತೃಪ್ತಾ ತ್ಯಾಗಿ ಎಂಬ ಶಿಕ್ಷಕಿ ವಿರುದ್ಧ ಈಗ ಕೇಸು ದಾಖಲಾಗಿದೆ.
ಪ್ರಕರಣದ ಬಗ್ಗೆ ಮಾತನಾಡಿದ ಅವರು, ಇದೊಂದು ಸಣ್ಣ ವಿಚಾರ. ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಎಡಿಟ್ ಮಾಡಲಾಗಿದೆ. ಅದನ್ನು ನೆಪ ಮಾಡಿಕೊಂಡು ನನ್ನ ವಿರುದ್ಧ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಅರವಿಂದ ಮಲ್ಲಪ್ಪ ಬಂಗಾರಿ “ವಿದ್ಯಾರ್ಥಿಯ ಹೆತ್ತವರು ದೂರು ನೀಡಲು ಹಿಂದೇಟು ಹಾಕಿದ್ದರು. ನಂತರ ಅವರು ಠಾಣೆಯಲ್ಲಿ ದೂರು ನೀಡಿದ್ದರು. ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಶಿಕ್ಷಣ ಇಲಾಖೆ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಶಾಲೆಯ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
ವಿದ್ಯಾರ್ಥಿಗೆ ಹೊಡೆದ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಶಿಕ್ಷಕಿ ಇಂಥ ಕ್ರಮ ಕೈಗೊಳ್ಳಬಾರದಿತ್ತು. ಬಿಜೆಪಿ ಜನರ ಮನಸ್ಸುಗಳಲ್ಲಿ ದ್ವೇಷ ತುಂಬಿಸುತ್ತಿದೆ’ ಎಂದು ಟೀಕಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಟೀಕೆ ಮಾಡಿ “ಜನರನ್ನು ವಿಭಜಿಸುವಲ್ಲಿ ಬಿಜೆಪಿ ನಿರತವಾಗಿದೆ’ ಎಂದಿದ್ದಾರೆ. ಇದೆಲ್ಲವೂ ಪ್ರತಿಪಕ್ಷಗಳ ರಾಜಕೀಯ ಅಜೆಂಡಾ ಎಂದು ಬಿಜೆಪಿ ಟೀಕಿಸಿದೆ.