ಬೆಳ್ತಂಗಡಿ: ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನಬದ್ಧವಾದ ರಾಜ್ಯಾಂಗಗಳು ಸಮರ್ಥವಾಗಿ ಕಠೋರವಾಗಿ ನಿರ್ಣಯಗಳನ್ನು ತೆಗೆದುಕೊಂಡಾಗ ಪ್ರವೀಣ್ ನೆಟ್ಟಾರ್ ಮೇಲೆ ನಡೆದಂತಹ ದುಷ್ಕೃತ್ಯಗಳು ನಡೆಯುವುದಿಲ್ಲ, ಪ್ರವೀಣ್ ಅವರ ಜೀವಹಾನಿ ಘಟನೆ ಈ ನಾಡಿಗೆ ಶೋಕತಂದಿದೆ ಎಂದು ಧರ್ಮಸ್ಥಳ ಕನ್ಯಾಡಿ ಶ್ರೀ ರಾಮಕ್ಷೇತ್ರದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷದ ಸರಕಾರಗಳು ನುಡಿದಂತೆ ನಡೆಯದಿದದ್ದಾಗ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುವಂತಾಗುತ್ತದೆ. ಇವತ್ತು ಸರಕಾರಗಳು ಅಥವಾ ಸಂಘ ಸಂಸ್ಥೆಗಳು ಅವರಿಗೆ ಪರಿಹಾರವನ್ನೇನೋ ಘೋಷಿಸಬಹುದು, ಆದರೆ ಅವನ ಕುಟುಂಬಕ್ಕೆ ಆದ ನಷ್ಟ, ಅವನ ಹೆಂಡತಿ ಮಕ್ಕಳು ತಂದೆ ತಾಯಿ ಈ ಘಟನೆಯ ದುಃಖವನ್ನು ಜೀವನಪರ್ಯಂತ ಮರೆಯಲಾಗುವುದಿಲ್ಲ ಎಂದರು.
ಭಾರತೀಯ ಋಷಿಮುನಿಗಳು, ಸನಾತನ ಧರ್ಮ ಸದಾ ಶಾಂತಿ ಮಂತ್ರವನ್ನೇ ಬೋಧಿಸುತ್ತಾ ಬಂದಿರುವಂತಹದು. ಬ್ರಹ್ಮಶ್ರೀ ನಾರಾಯಣಗುರುಗಳು ಈ ಸಾಮಜದ ಶಾಂತಿಗಾಗಿ ಜನ್ಮತಾಳಿದ್ದರು. ಬುದ್ದ ಬಸವಣ್ಣರು ಶಾಂತಿ ಮಂತ್ರಗಳನ್ನೇ ಬೋಧಿಸಿದರು. ಇಂತಹ ಘಟನೆ ಇದು ಒಂದಲ್ಲ ಈ ಮೊದಲಿನಿಂದಲೂ ಕರಾವಳಿಯಲ್ಲಿ ಅನೇಕ ಬಾರಿ ನಡೆದಿದೆ. ಇಂದಿನ ಕಠೋರ ಮನಸ್ಸಿನ ಮತಾಂದ ಶಕ್ತಿಗೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಸುವ ಮಾರ್ಗದರ್ಶಕರಿಲ್ಲ. ಇದಕ್ಕೆ ಯಾವುದೇ ಪಕ್ಷದ ಸರಕಾರವಿರಲಿ, ಯಾವುದೇ ಸಂದರ್ಭವಿರಲಿ, ಯಾವುದೇ ಮತ ಪಂಥದ ವ್ಯಕ್ತಿಗಳು ದುಷ್ಕೃತ್ಯ ನಡೆಸಿದಾಗ ನಿಷ್ಕಾರುಣ್ಯವಾಗಿ ಕಠಿಣವಾದ ಶಿಕ್ಷೆಯನ್ನು ವಿಧಿಸಿದಾಗ ಇಂತಹ ಜೀವಹಾನಿ ನಡೆಯುವುದಿಲ್ಲ ಎಂದರು.
ಇದನ್ನೂ ಓದಿ: ಬಿಜೆಪಿಗೆ ಬಿಸಿ ತುಪ್ಪವಾದ ಕರಾವಳಿ ಹಿಂದುತ್ವ: ತನ್ನದೇ ಅಸ್ತ್ರ ತಿರುಮಂತ್ರ ಆಗಿದ್ದು ಹೇಗೆ?
ಈ ನೋವಿನ ಘಟನೆ ಮನಸ್ಸಿಗೆ ಭಾರವಾಗಿದೆ. ಇಂಥ ಘಟನೆಗಳು ಈ ದೇಶಾದ್ಯಂತ ನಡೆಯದಿರುಲು ಕಾನೂನಿನ ಬಿಗಿತಕ್ಕೆ ಸರಕಾರಗಳು ಮುಂದಾಗಲಿ ಎಂದು ನನ್ನ ಸ್ವಾಮಿ ಶ್ರೀರಾಮಚಂದ್ರ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಉದಯವಾಣಿಗೆ ತಿಳಿಸಿದ್ದಾರೆ.