Advertisement

ಪುಂಗನೂರು ಹಸು ನೋಡಿದಿರಾ?

08:44 PM Feb 01, 2020 | Sriram |

ಜಗತ್ತಿನಲ್ಲೇ ಅತಿ ಸುಂದರ, ಗಿಡ್ಡದಾದ ಮತ್ತು ಅತಿ ಹೆಚ್ಚು ಔಷಧೀಯ ಗುಣದ ಹಾಲು ನೀಡುವ ಮತ್ತು ಧಾರ್ಮಿಕವಾಗಿಯೂ ಮಹತ್ವ ಹೊಂದಿದ ಗೋತಳಿ ಪುಂಗನೂರು.

Advertisement

ಆಂಧ್ರಪ್ರದೇಶದ ಚಿತ್ತೂರು ಮೂಲದ ಈ ತಳಿ ಅಳಿವಿನಂಚಿನಲ್ಲಿದ್ದು, ಕೆಲವೇ ನೂರರಷ್ಟು ಹಸುಗಳು ಈಗ ಭಾರತದಲ್ಲಿ ಉಳಿದುಕೊಂಡಿವೆ. ತಿರುಪತಿಯ ಶ್ರೀನಿವಾಸನಿಗೆ ನಿತ್ಯ ಅಭಿಷೇಕ, ನೈವೇದ್ಯಕ್ಕೆ ಸಲ್ಲಿಕೆಯಾಗುವ ಹಾಲೂ ಇದೇ ತಳಿಯದ್ದು. ಇಂತಹ ಶ್ರೇಷ್ಠತೆಗಳನ್ನು ಹೊಂದಿದ ಅತ್ಯಪ ರೂಪದ ತಳಿ ಈಗ ನಮ್ಮ ಕರಾವಳಿಯಲ್ಲೂ ಇದೆ.

ಇನ್ನಂಜೆಯ ವಿದ್ವಾನ್‌ ಕೊರಂಗ್ರಪಾಡಿ ಶ್ರೀನಿವಾಸ ತಂತ್ರಿ ಅವರು ತಮ್ಮ ಮನೆಯಲ್ಲಿ ಈ ವಿಶಿಷ್ಟ ತಳಿಯ 2 ಹಸುಗಳನ್ನು ಸಾಕುತ್ತಿದ್ದಾರೆ.

ವಿಶೇಷಗಳೇನು?
ಈ ಜಾತಿಯ ಹಸುವಿನ ಹಾಲಿನಲ್ಲಿ ಅಧಿಕ ಕೊಬ್ಬಿನಾಂಶ ಇರುತ್ತದೆ. ಸಾಮಾನ್ಯವಾಗಿ ಹಸುವಿನ ಹಾಲಿನಲ್ಲಿ ಶೇ. 3ರಿಂದ 3.5 ಕೊಬ್ಬಿನಾಂಶ ಇದ್ದರೆ ಪುಂಗನೂರು ತಳಿಯ ಹಸುವಿನ ಹಾಲು ಶೇ.8 ಕೊಬ್ಬಿನಾಂಶ ಹೊಂದಿರುತ್ತದೆ. ಬಿಳಿ ಮತ್ತು ತಿಳಿ ಬೂದು ಬಣ್ಣದಲ್ಲಿರುತ್ತವೆ. ಅಗಲವಾದ ಹಣೆ ಮತ್ತು ಚಿಕ್ಕದಾದ ಕೊಂಬುಗಳನ್ನು ಹೊಂದಿರುತ್ತವೆ. ಸರಾಸರಿ 70ರಿಂದ 90 ಸೆಂ.ಮೀ. ಎತ್ತರ ಮತ್ತು 115ರಿಂದ 200 ಕಿಲೋ ದೇಹ ತೂಕವನ್ನು ಹೊಂದಿರುತ್ತವೆ.

ಹೆಚ್ಚು ಉಷ್ಣಾಂಶವನ್ನು ಸಹಿಸುವ ಶಕ್ತಿ
ದಿನಕ್ಕೆ ಸರಾಸರಿ 3ರಿಂದ 5 ಲೀಟರ್‌ ಹಾಲು ಕೊಡುತ್ತದೆ. 5 ಕಿಲೋ ಆಹಾರ ಬೇಕು. ಅತಿ ಹೆಚ್ಚು ಉಷ್ಣಾಂಶ ಇದ್ದರೂ ಸಹಿಸಿಕೊಳ್ಳಬಲ್ಲವು. ಬಾಲದ ರೋಮ ನೆಲಕ್ಕೆ ತಾಗುತ್ತಿರುತ್ತದೆ. ಗಂಟಲಿನ ಕೆಳಗಿನ ಚರ್ಮ ಹೆಚ್ಚಿಗೆ ಉದ್ದ ಇದ್ದು, ಇದು ಉದ್ದ ಇದ್ದಷ್ಟೂ ತಳಿಯ ಶುದ್ಧತೆ ಹೆಚ್ಚು ಎಂದು ತಿಳಿಯಲಾಗುತ್ತದೆ.

Advertisement

ಲಕ್ಷಗಟ್ಟಲೆ ಬೆಲೆ
ದೇಶೀ ತಳಿಯ ಹಸುಗಳಂತೆ ಆರೈಕೆಯು ಸಾಕಾಗುತ್ತದೆ. ಆದರೆ ಈ ಹಸುಗಳಿಗೆ ಹೆಚ್ಚು ಪ್ರೀತಿಯನ್ನು ತೋರಿಸಬೇಕಿದೆ. ಮಾತನಾಡುತ್ತಿರಬೇಕು. ಮನೆಯೊಳಗೆ ಬಿಸಿಲೊಡ್ಡುವಂತೆ ಸಾಕಲಾಗುತ್ತಿದೆ. ಇದರ ತುಪ್ಪವೂ ಶ್ರೇಷ್ಠವಾಗಿದ್ದು, ಲೀಟರ್‌ಗೆ ಸುಮಾರು 5 ಸಾವಿರ ರೂ. ಬೆಲೆಬಾಳುತ್ತದೆ. ದೇವರಿಗೆ ಅಭಿಷೇಕ, ಹೋಮಗಳಲ್ಲಿ ಮಹತ್ವವನ್ನು ಹೊಂದಿರುತ್ತದೆ. ಸಣ್ಣ ಮಕ್ಕಳಿಗೆ ಹಾಲು ನೀಡಿದಲ್ಲಿ ದೇಹವು ಹೆಚ್ಚು ಕಾಂತಿಯುಕ್ತವಾಗಿರುತ್ತದೆ. ಶೇ.99.9 ಪುಂಗನೂರು ಶುದ್ಧ ತಳಿ, ಕೊಂಬು ಹೊಂದಿರುವ 2 ವರ್ಷ 3 ತಿಂಗಳ (2.5 ಲಕ್ಷ ರೂ.) ಮತ್ತು ಶೇ.85 ಪುಂಗನೂರು ತಳಿಯ ಕೊಂಬು ಹೊಂದಿಲ್ಲದ 1 ವರ್ಷ 6 ತಿಂಗಳ (1.6ಲಕ್ಷ ರೂ.) ಎರಡು ಗೋವುಗಳನ್ನು ಆಂಧ್ರಪ್ರದೇಶದಿಂದ ಖರೀದಿಸಿ ತಂದಿರುವುದಾಗಿ ಶ್ರೀನಿವಾಸ ತಂತ್ರಿ ಹೇಳುತ್ತಾರೆ.

ಪುರಾಣದ ಕಾಮಧೇನು
ಪುರಾಣದಲ್ಲಿ ಕಾಮಧೇನುವಾಗಿ ಉಲ್ಲೇಖೀಸುತ್ತಿದ್ದ ಪುಂಗನೂರು ತಳಿಯ ಈ ಹಸುಗಳಿಗೆ ಅಮ್ಮ ರುಕ್ಮಿಣೀ ಮತ್ತು ಅಜ್ಜಿ ತಂಗಮ್ಮ ಹೆಸರನ್ನು ಶ್ರೀನಿವಾಸ ತಂತ್ರಿ ಅವರು ಇಟ್ಟಿದ್ದಾರೆ. ಕೃತಕ ಗರ್ಭಧಾರಣೆ ಅಧಿಕಾರಿ ಸುಬ್ರಹ್ಮಣ್ಯ ಎನ್‌. ಭಟ್‌ ಮಾರ್ಗದರ್ಶನದಲ್ಲಿ ಆರೈಕೆ ಮಾಡುತ್ತಿದ್ದಾರೆ.

-ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next