ಅಫಜಲಪುರ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿರುವ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 67 ಲಕ್ಷ 43 ಸಾವಿರದ 900 ರೂ. ನಗದು, 10 ಗ್ರಾಂ ಬಂಗಾರ, 358 ಗ್ರಾಂ ಬೆಳ್ಳಿ ಆಭರಣ ಹಾಗೂ ಗಟ್ಟಿ ಕಾಣಿಕೆಯಾಗಿ ಬಂದಿದೆ ಎಂದು ತಹಶೀಲ್ದಾರ ಸಂಜೀವಕುಮಾರ ದಾಸರ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಸ್ಥಳಿಯ ಎಸ್‌ಬಿಐ ಸಿಬ್ಬಂದಿ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ದೇವಸ್ಥಾನದ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ ಸಹಕಾರ ನೀಡಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬ್ಯಾಡರಹಳ್ಳಿ: ಪತ್ನಿ ಕೊಂದು ಹೃದಯಾಘಾತ ಸಾವು ಎಂದ ಪತಿ
ಪುನೀತ್ ಪುನರ್ಜನ್ಮಕ್ಕೆ ಚೀಟಿ ಹಾಕಿದ ಭಕ್ತ
ಚಿತ್ರನಟ ದಿ. ಪುನೀತ್ ರಾಜಕುಮಾರ ಮತ್ತೆ ಕನ್ನಡ ನಾಡಿನಲ್ಲಿ ಜನ್ಮವೆತ್ತಲಿ ಎಂದು ಹರಕೆ ಚೀಟಿ ಬರೆದು ಹುಂಡಿಗೆ ಹಾಕಿದ್ದು ವಿಶೇಷವಾಗಿತ್ತು. ಹುಂಡಿ ಹಣ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ಈ ಚೀಟಿ ಬರುತ್ತಿದ್ದಂತೆ ಭಾವುಕರಾಗಿ ದಿ. ಪುನೀತ್ ರಾಜಕುಮಾರ ಮತ್ತೆ ಹುಟ್ಟಿ ಬರಲಿ ಎಂದು ದತ್ತ ಮಹಾರಾಜರಲ್ಲಿ ಬೇಡಿಕೊಂಡರು.
ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ ರಾದ ಶಿವಕಾಂತಮ್ಮ, ದೇವಮ್ಮ, ಗೀತಾ, ಗೌತಮ ಗಾಯಕವಾಡ, ಕಂದಾಯ ನಿರೀಕ್ಷಕರಾದ ಬಸವರಾಜ ಸಿಂಪಿ, ಸಂಜೀವಕುಮಾರ ಅತನುರ, ಚಂದ್ರಶೇಖರ, ದೇವಸ್ಥಾನದ ಸಿಬ್ಬಂದಿಗಳಾದ ದತ್ತು ನಿಂಬರ್ಗಿ, ರಮೇಶ, ಸತೀಶ, ಮಡಿವಾಳ, ಧನರಾಜ ಮತ್ತಿತರರು ಇದ್ದರು. ದೇವಲ ಗಾಣಗಾಪುರ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.