ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಕನಸಿನ ಯೋಜನೆ ‘ಗಂಧದ ಗುಡಿ’ಯ ಟ್ರೇಲರ್ ಇಂದು ಬಿಡುಗಡೆಯಾಗಿದೆ. 2.40 ನಿಮಿಷದ ಟ್ರೇಲರ್ ನಲ್ಲಿ ಕರ್ನಾಟಕದ ವನ್ಯಸಿರಿಯನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ.
“ಪಿಆರ್ ಕೆ ಪ್ರೊಡಕ್ಷನ್ಸ್” ಯೂಟ್ಯೂಬ್ ಚಾನೆಲ್ ನಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್, “ ಅಪ್ಪು ನಮ್ಮ ಮಧ್ಯೆ ಇಲ್ಲ, ಆದರೆ ಅವರ ಜೀವನ ಮತ್ತು ಕೆಲಸವು ನಮಗೆ ‘ವಸುಧೈವ ಕುಟುಂಬಕಂ’ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ. ಗಂಧದ ಗುಡಿಯು ಸಿನಿಮಾದ ಆಚರಣೆ. ನಮ್ಮ ನೆಲದ ಶ್ರೀಮಂತ ಪರಂಪರೆ, ಸಂಸ್ಕೃತಿ, ಪ್ರಕೃತಿ ಮತ್ತು ವೈವಿಧ್ಯತೆಗೆ ಕನ್ನಡಿ ಹಿಡಿದಿದೆ” ಎಂದಿದ್ದಾರೆ.
ಇದನ್ನೂ ಓದಿ:ಮಿಷನ್ 2024: ಲೋಕಸಭಾ ಎಲೆಕ್ಷನ್’ಗೆ ಬಿಜೆಪಿ ತಂತ್ರ; ಸೋತ ಕ್ಷೇತ್ರಗಳಲ್ಲಿ ಈ ಬಾರಿ ಮೋದಿ ರಾಲಿ
ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಿರ್ಮಿಸಿ, ತೆರೆಮೇಲೆ ಕಾಣಿಸಿಕೊಂಡಿರುವ “ಗಂಧದ ಗುಡಿ’ ಡಾಕ್ಯುಮೆಂಟರಿ, ಇದೇ ಅಕ್ಟೋಬರ್ 28ಕ್ಕೆ ಬಿಡುಗಡೆಯಾಗುತ್ತಿದೆ.
ಅಂದಹಾಗೆ, “ಗಂಧದ ಗುಡಿ’ ಕಮರ್ಷಿಯಲ್ ಸಿನಿಮಾವಲ್ಲ. ಕರ್ನಾಟಕದ ಭೌಗೋಳಿಕ ವೈವಿಧ್ಯತೆ, ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ಡಾಕ್ಯುಮೆಂಟರಿ ರೂಪದಲ್ಲಿ ತೆರೆಮೇಲೆ ತರಲಾಗಿದೆ. ಪುನೀತ್ ರಾಜಕುಮಾರ್ ಕೂಡ ಈ ಡಾಕ್ಯುಮೆಂಟರಿಯಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದು, ಪುನೀತ್ ರಾಜಕುಮಾರ್ ಮೊದಲ ವರ್ಷದ ಪುಣ್ಯಸ್ಮರಣೆಯ ಸಂದರ್ಭದಲ್ಲಿ “ಗಂಧದ ಗುಡಿ’ಯನ್ನು ಸಿನಿಮಾದಂತೆಯೇ ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲು “ಪಿಆರ್‌ಕೆ ಪ್ರೊಡಕ್ಷನ್ಸ್’ ಪ್ಲಾನ್ ಹಾಕಿಕೊಂಡಿದೆ.