Advertisement

ಕಾಫಿನಾಡಿನ ಅಳಿಯ ಪುನೀತ್‌

02:55 PM Oct 30, 2021 | Team Udayavani |

ಚಿಕ್ಕಮಗಳೂರು: ಕನ್ನಡ ಚಲನಚಿತ್ರನಟ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನದೊಂದಿಗೆ ತಮ್ಮ ನೆಚ್ಚಿನ ನಟ ಹಾಗೂ ಕಾಫಿನಾಡಿನ ಅಳಿಯನನ್ನು ಕಳೆದುಕೊಂಡ ಚಿಕ್ಕಮಗಳೂರು ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ.

Advertisement

ಪುನೀತ್‌ ಅವರು ಕಾಫಿನಾಡಿನೊಂದಿಗೆ ಅಪಾರವಾದ ನಂಟು ಹೊಂದಿದ್ದು, ಅವರ ಅನೇಕ ಚಲನಚಿತ್ರಗಳಿಗೆ ಈ ನೆಲ ಸಾಕ್ಷಿಯಾಗಿದೆ. ಅಭಿ, ಅಪ್ಪು, ಮಿಲನ, ಬೆಟ್ಟದಹೂವು(ಕೆಮ್ಮಣ್ಣುಗುಂಡಿ ಸಮೀಪ) ಸೇರಿದಂತೆ 15ಕ್ಕೂ ಹೆಚ್ಚು ಚಲನಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿತ್ತು. ಚಿತ್ರೀಕರಣದ ಜೊತೆಗೆ ಕೌಟುಂಬಿಕ ನಂಟು ಹೊಂದುವ ಮೂಲಕ ಕಾಫಿನಾಡಿನ ಅಳಿಯನಾಗಿದ್ದು, ಕನ್ನಡ ಚಲನಚಿತ್ರ ರಂಗದ ಪವರ್‌ಸ್ಟಾರ್‌ ಕಾಫಿನಾಡಿನ ಅಳಿಯ ಎಂಬ ಗರಿಮೆ ಹೆಚ್ಚಿಸಿತ್ತು. ಅವರ ಅಕಾಲಿಕ ನಿಧನ ಈಗ ಒಂದು ರೀತಿಯ ಅನಾಥ ಭಾವ ಮೂಡಿಸಿದೆ. ಮನೆ ಮಗನನ್ನು ಕಳೆದುಕೊಂಡಂತಾಗಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಬಾಗೇಮನೆ ಬಿ.ರೇವನಾಥ್‌ ಮತ್ತು ವಿಜಯಾ ರೇವನಾಥ್‌ ಅವರ ಪುತ್ರಿ ಅಶ್ವಿ‌ನಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಕಾಫಿನಾಡಿನ ಅಳಿಯನಾದರು ಪುನೀತ್‌. ರೇವನಾಥ್‌ ಕುಟುಂಬ 40 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಬಾಗೇಮನೆಯಲ್ಲಿ ಅವರಿಗೆ ಸೇರಿದ ಮನೆ ಇದೆ. ಅಲ್ಲಿಗೆ ಅನೇಕ ಬಾರಿ ಪುನೀತ್‌ ರಾಜ್‌ಕುಮಾರ್‌ ಬಂದು ತಂಗಿದ್ದರು. ಅವರ ನಿಧನದಿಂದ ಬಾಗೇಮನೆ ಮತ್ತು ಜಿಲ್ಲಾದ್ಯಂತ ಅತೀವ ಶೋಕ ಮಡುಗಟ್ಟಿದೆ.

ಅಶ್ವಿ‌ನಿ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರು ಪ್ರೀತಿಸಿ ಕುಟುಂಬದ ಒಪ್ಪಿಗೆಯೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು ಎಂದು ಚಿಕ್ಕಮಗಳೂರು ನಗರದಲ್ಲಿ ನೆಲೆಸಿರುವ ಅಶ್ವಿ‌ನಿ ಅವರ ಸಂಬಂಧಿ ಐ.ಬಿ. ಶಂಕರ್‌ ಮತ್ತು ಉಮಾ ಶಂಕರ್‌ ದಂಪತಿ ಅಂದಿನ ದಿನಗಳನ್ನು ನೆನೆದು ಕಣ್ಣೀರಿಟ್ಟರು.

ಬಿ.ರೇವನಾಥ್‌ ಮತ್ತು ಐ.ಬಿ.ಶಂಕರ್‌ ಸೋದರ ಸಂಬಂಧಿಯಾಗಿದ್ದು, ನಮ್ಮ ಕುಟುಂಬದೊಂದಿಗೆ ಬಹಳ ಒಡನಾಟ ಹೊಂದಿದ್ದರು. ಅಶ್ವಿ‌ನಿ ಮತ್ತು ನಮ್ಮ ಮಗಳು ಗೌರವಿ ಶಂಕರ್‌ ಒಟ್ಟಿಗೆ ಆಡಿ ಬೆಳೆದವರು. ಪುನೀತ್‌ ರಾಜ್‌ಕುಮಾರ್‌ ಚಿತ್ರೀಕರಣದ ಹಾಗೂ ಇತರೆ ಸಂದರ್ಭ ಚಿಕ್ಕಮಗಳೂರಿಗೆ ಬಂದಾಗಲೆಲ್ಲ ನಮ್ಮ ಮನೆಗೆ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದರು. ನಮ್ಮನ್ನೆಲ್ಲ ತಮ್ಮ ಮನೆಯವರಂತೆ ಪ್ರೀತಿಸುತ್ತಿದ್ದರು ಎಂದು ಭಾವುಕರಾದರು.

Advertisement

ಐ.ಬಿ.ಶಂಕರ್‌ ಬಗ್ಗೆ ವಿಶೇಷವಾದ ಕಾಳಜಿ ಹೊಂದಿದ್ದ ಪುನೀತ್‌ ರಾಜ್‌ಕುಮಾರ್‌, ಇತ್ತೀಚೆಗೆ ತಮ್ಮ ಮಗಳು ವಿದೇಶಕ್ಕೆ ಹೋಗುವಾಗ ನಮ್ಮನೆಲ್ಲ ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ನಾವೆಲ್ಲ ಭಾಗಿಯಾಗಿದ್ದೆವು. ಅದೇ ಕೊನೆಯದಾಗಿ ಅವರನ್ನು ನೋಡಿದ್ದು ಎಂದು ಅಂದಿನ ಕ್ಷಣವನ್ನು ನೆನೆದರು. ಇತ್ತೀಚೆಗೆ ಬೆಂಗಳೂರಿಗೆ ಹೋದಾಗ ನಮ್ಮ ಕಾರಿನ ಡ್ರೈವರ್‌ ಅಪ್ಪು ಜೊತೆ ಫೋಟೋ ತೆಗೆಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದ. ಆದರೆ, ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನು ಅಪ್ಪುಗೆ ತಿಳಿಸಿದಾಗ ತುಂಬಾ ಬೇಸರಪಟ್ಟುಕೊಂಡಿದ್ದ ಎಂದು ಉಮಾ ಶಂಕರ್‌ ದುಖಿಃತರಾದರು.

ಪರಿಸರ ಪ್ರೇಮಿ: ಚಿಕ್ಕಮಗಳೂರಿನ ನೇಚರ್‌ ನೋಡಲು ಅನೇಕ ಸಲ ಚಿಕ್ಕಮಗಳೂರಿಗೆ ಬರುತ್ತಿದ್ದರು. ಮುಳ್ಳಯ್ಯನಗಿರಿಗೆ ಸೇರಿದಂತೆ ಮೂಡಿಗೆರೆ, ಕೊಟ್ಟಿಗೆಹಾರ ಹೀಗೆ ಅನೇಕ ಕಡೆ ಬಹಳಷ್ಟು ಬಾರಿ ಬಂದಿದ್ದರು. ಇಲ್ಲಿಗೆ ಬಂದಾಗಲೆಲ್ಲ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಚಿಕ್ಕಮಗಳೂರಿಗೆ ಬಂದಾಗಲೆಲ್ಲ ಹೆಚ್ಚಾಗಿ ಸರಾಯ್‌ ಹೊಟೇಲ್‌, ತ್ರಿವಿಕ್‌, ಕ್ರೀಮ್‌ರೋಸ್‌ ಹೊಟೇಲ್‌ಗ‌ಳಲ್ಲಿ ತಂಗುತ್ತಿದ್ದರು. ಮಲೆನಾಡಿನ ಅಕ್ಕಿರೊಟ್ಟಿ, ಮೀನುಸಾರು, ಮಟನ್‌ ಚಾಪ್ಸ್‌, ನಾನ್‌ ವೆಜ್‌ ಎಂಜಾಯ್‌ ಮಾಡುತ್ತಿದ್ದರು ಎಂದು ಐ.ಬಿ. ಶಂಕರ್‌ ಹೇಳಿದರು.

ಪುನೀತ್‌ ರಾಜ್‌ಕುಮಾರ್‌ ಬಾಲನಟನಾಗಿ ಅಭಿನಯಿಸಿದ್ದ ಬೆಟ್ಟದ ಹೂವು ಚಲನಚಿತ್ರ ಬಹುತೇಕ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಸುತ್ತಮುತ್ತ ಪ್ರದೇಶದಲ್ಲಿಚಿತ್ರೀಕರಿಸಲಾಗಿದ್ದು, ಇತ್ತೀಚೆಗೆ ಈ ಚಿತ್ರ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಂದು ಚಿತ್ರೀಕರಣ ನಡೆಸಿದ ಜಾಗಗಳಿಗೆ, ಮನೆಗೆ ಭೇಟಿ ನೀಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆ ವಿಡಿಯೋ ಭಾರೀ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಅಂದಿನ ಪರಿಸರ ಹಾಗೂ ಇಂದಿನ ಬದಲಾದ ಪರಿಸರವನ್ನು ನೋಡಿ ಭಾರೀ ಎಂಜಾಯ್‌ ಮಾಡಿದ್ದರು.

ಪುನೀತ್‌ ಪತ್ನಿ ತವರಲ್ಲಿ ನೀರವ ಮೌನ :

ಚಿಕ್ಕಮಗಳೂರು: ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿ‌ನಿ ತಂದೆ ಬಿ.ರೇವನಾಥ್‌ ತಾಯಿ ವಿಜಯ ಅವರು ವಾಸವಿದ್ದ ಭಾಗೆಮನೆ ನಿವಾಸದಲ್ಲಿ ಇದೀಗ ನೀರವ ಮೌನ ಆವರಿಸಿದೆ.ಪುನೀತ್‌ ರಾಜ್‌ಕುಮಾರ್‌ ಹಾಗೂ ಅಶ್ವಿ‌ನಿ ಆಗಾಗ ಭಾಗಮನೆ ಗ್ರಾಮಕ್ಕೆ ಬರುತ್ತಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮಿಂದ ದೂರವಾಗಿರುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಅಶ್ವಿ‌ನಿಯವರ ಚಿಕ್ಕಪ್ಪನ ಮಗ ಭರತ್‌ ದುಃಖ ವ್ಯಕ್ತಪಡಿಸಿದರು.ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿದ್ದಾಗ ಭೇಟಿ ಮಾಡಿದ್ದೆ. ಭಾಗಮನೆಗೆ ವರ್ಷಕ್ಕೊಮ್ಮೆ ಬರುತ್ತಿದ್ದರು. ಸದ್ಯದಲ್ಲೇ ಬರುವುದಾಗಿ ಹೇಳಿದ್ದರು. ಟಿವಿ ನೋಡಿ ನಾನು ಶಾಕ್‌ಗೆ ಒಳಗಾದೆ ಎಂದು ದುಃಖಿತರಾದರು. ಪುನೀತ್‌ ರಾಜ್‌ಕುಮಾರ್‌ ಪ್ರತಿಸಲ ಮನೆಗೆ ಬಂದಾಗ ಅಕ್ಕಿ ರೊಟ್ಟಿ, ಚಿಕನ್‌ ಸಾರು ಮಾಡಿಸಿಕೊಂಡು ತಿನ್ನುತ್ತಿದ್ದರು. ಭಜರಂಗಿ ಕಾರ್ಯಕ್ರಮದ ಡ್ಯಾನ್ಸ್‌ ವಿಡಿಯೋ ನೋಡಿ ತುಂಬ ಖುಷಿಯಾಗಿತ್ತು. ಇವತ್ತು ತುಂಬಾ ಬೇಜಾರಾಗುತ್ತಿದೆ. ಕಾಲ್‌ ಮಾಡಿದಾಗ ತುಂಬಾ ಚೆನ್ನಾಗಿ ಮಾತ ನಾಡುತ್ತಿದ್ದರು. ಚಿಕ್ಕಮಗಳೂರು ಅಂದರೆ ಅವರಿಗೆ ತುಂಬಾ ಇಷ್ಟ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next