ಅಪ್ಪು ಇದ್ದಿದ್ದರೆ….
ಸದಾಶಿವ ನಗರದ ಆ ದೊಡ್ಮನೆಯೆದುರು ಸಹಸ್ರಾರು ಅಭಿಮಾನಿಗಳ ದಂಡು. ಒಂದಷ್ಟು ಹಾರಗಳು, ದೊಡ್ಡ ದೊಡ್ಡ ಕಟೌಟುಗಳು, ಹಲವರ ಕೈಯಲ್ಲಿ ಕೇಕ್. ಹೊಸ ಸಿನಿಮಾದ ಪೋಸ್ಟರ್- ಟ್ರೇಲರ್, ಒಂದಷ್ಟು ಸಿನಿಮಾಗಳು ಅನೌನ್ಸ್ ಮೆಂಟ್. ಎಲ್ಲರ ಹೃದಯದಲ್ಲೂ, ಮಾತಿನಲ್ಲೂ ಒಂದೇ ಹೆಸರು. ಎಲ್ಲರ ಕಣ್ಣಲ್ಲೂ ಒಂದೇ ಬಿಂಬ. ‘ಅಪ್ಪು.. ಅಪ್ಪು.. ಅಪ್ಪು’
ದೊಡ್ಡ ಮನೆಯ ಮುದ್ದು ಕುವರ, ಅಭಿಮಾನಿಗಳ ಪಾಲಿನ ಸರದಾರ, ವಿಶ್ವಕ್ಕೆ ಮಮತೆಯ ಅಪ್ಪುಗೆ ನೀಡಿದ ಪುನೀತ್ ರಾಜಕುಮಾರ್ ಅವರು ಒಂದು ವೇಳೆ ಬದುಕಿದ್ದರೆ ಇಂದು (ಮಾರ್ಚ್ 17) ಈ ರೀತಿಯ ಚಿತ್ರಣ ಇರುತ್ತಿತ್ತು.
ಅಪ್ಪು ಅಗಲಿದ ಬಳಿಕದ ಎರಡನೇ ಹುಟ್ಟುಹಬ್ಬದ ಇಂದು. ಅಪ್ಪು ಇಲ್ಲದ ಬೇಸರದ ನಡುವೆಯೂ ಅಭಿಮಾನಿಗಳು ತಮ್ಮ ಹೃದಯ ರಾಜಕುಮಾರನ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯ ಬಳಿ ಜನಸಾಗರವೇ ಹರಿದು ಬರುತ್ತಿದೆ.
Related Articles
ಬೆಳಗ್ಗೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಸಹೋದರ ಶಿವರಾಜ್ ಕುಮಾರ್ ಕುಟುಂಬ ಸೇರಿದಂತೆ ಇತರರು ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ನಸುಕಿನ ಜಾವವೇ ಪುನೀತ್ ಸಹೋದರ ರಾಘವೇಂದ್ರ ರಾಜ್ ಕುಮಾರ್ ಕುಟುಂಬಸ್ಥರು, ಪುನೀತ್ ಪುತ್ರಿ ವಂದಿತಾ ತೆರಳಿ ಅವರ ಇಷ್ಟದ ತಿನಿಸುಗಳು, ಕೇಕ್ ಇಟ್ಟು ಕತ್ತರಿಸಿ, ಪೂಜೆ ಸಲ್ಲಿಸಿ ತಿಂದು ಗೌರವ ಸಲ್ಲಿಸಿದ್ದಾರೆ.
ಸಮಾಧಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಅಪ್ಪು ಅಭಿಮಾನಿ ಬಳಗದಿಂದ ರಕ್ತದಾನ, ಅನ್ನದಾನದಂತಹ ಕೆಲಸಗಳನ್ನು ಮಾಡಲಾಗುತ್ತಿದೆ.
ಕಳೆದ ವರ್ಷದ ಅಪ್ಪು ಬರ್ತ್ ಡೇಗೆ ಅವರು ನಾಯಕನಟನಾಗಿ ನಟಿಸಿದ್ದ ಕೊನೆಯ ಚಿತ್ರ ‘ಜೇಮ್ಸ್’ ಬಿಡುಗಡೆ ಕಂಡಿತ್ತು. ಇದೀಗ ಅವರ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಒಟಿಟಿಯಲ್ಲಿ ತೆರೆ ಕಂಡಿದೆ. ಈ ಮೂಲಕ ಅಪ್ಪು ಅಭಿಮಾನಿಗಳೊಂದಿಗೆ ಜೀವಂತವಾಗಿದ್ದಾರೆ.