Advertisement

England ವೇಗದ ಬೌಲರ್‌; ಜೇಮ್ಸ್‌  ಆ್ಯಂಡರ್ಸನ್‌ಗೆ ಗೆಲುವಿನ ವಿದಾಯ

11:40 PM Jul 12, 2024 | Team Udayavani |

ಲಂಡನ್‌: ಒಂದೂವರೆ ಶತಮಾನ ದಷ್ಟು ಇತಿಹಾಸವಿರುವ ಟೆಸ್ಟ್‌ ಕ್ರಿಕೆಟ್‌ನಲ್ಲಿ 700 ವಿಕೆಟ್‌ ಉಡಾಯಿಸಿದ ವಿಶ್ವದ ಏಕೈಕ ವೇಗದ ಬೌಲರ್‌ ಎಂಬ ಖ್ಯಾತಿಯ ಜೇಮ್ಸ್‌ ಆ್ಯಂಡರ್ಸನ್‌ ಅವರಿಗೆ ಇಂಗ್ಲೆಂಡ್‌ ತಂಡ ಗೆಲುವಿನ ವಿದಾಯ ಸಲ್ಲಿಸಿದೆ. ವೆಸ್ಟ್‌ ಇಂಡೀಸ್‌ ಎದುರಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಹಾಗೂ 114 ರನ್ನುಗಳಿಂದ ಜಯಿಸಿದೆ. ಆದರೆ ಗೆಲುವಿನ ಸಂಭ್ರಮಕ್ಕಿಂತ “ಜಿಮ್ಮಿ’ ಆ್ಯಂಡರ್ಸನ್‌ ಅವರ ವಿದಾಯ ತಂಡವನ್ನು ಹೆಚ್ಚು ಕಾಡಿದೆ.

Advertisement

250 ರನ್ನುಗಳ ಭಾರೀ ಹಿನ್ನಡೆ ಸಿಲುಕಿದ ವೆಸ್ಟ್‌ ಇಂಡೀಸ್‌, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್‌ ಕುಸಿತಕ್ಕೊಳಗಾಗಿ 136 ರನ್ನುಗಳಿಗೆ ಆಲೌಟ್‌ ಆಯಿತು. ಇದರಲ್ಲಿ 3 ವಿಕೆಟ್‌ಗಳನ್ನು ಆ್ಯಂಡರ್ಸನ್‌ 32 ರನ್‌ ವೆಚ್ಚದಲ್ಲಿ ತಮ್ಮದಾಗಿಸಿಕೊಂಡರು. ಇದರೊಂದಿಗೆ ಅವರ ವಿಕೆಟ್‌ ಗಳಿಕೆ 704ಕ್ಕೆ ಏರಿತು. ಅಂದರೆ ಶೇನ್‌ ವಾರ್ನ್ ಗಳಿಕೆಗಿಂತ ಕೇವಲ 4 ವಿಕೆಟ್‌ ಕಡಿಮೆ.

ಸ್ವಿಂಗ್‌ ಮಾಸ್ಟರ್‌
ವಾಸಿಮ್‌ ಅಕ್ರಮ್‌ ಬಳಿಕ “ರೆಡ್‌ ಬಾಲ್‌ ಸ್ವಿಂಗ್‌ ಮಾಸ್ಟರ್‌’ ಎಂದು ಗುರುತಿಸಲ್ಪಟ್ಟ ಜೇಮ್ಸ್‌ ಆ್ಯಂಡರ್ಸನ್‌ಗೆ ನಾಡಿದ್ದು ಜುಲೈ 30ಕ್ಕೆ 42 ವರ್ಷ ತುಂಬುತ್ತದೆ. 2003ರಲ್ಲಿ ಜಿಂಬಾಬ್ವೆ ವಿರುದ್ಧ ಲಾರ್ಡ್ಸ್‌ ಅಂಗಳದಲ್ಲೇ ಟೆಸ್ಟ್‌ ಪದಾರ್ಪಣೆ ಮಾಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲೇ 5 ವಿಕೆಟ್‌ ಉಡಾಯಿಸಿದ ಸಾಹಸ ಇವರದಾಗಿತ್ತು. ಕಾಕತಾಳೀಯವೆಂಬಂತೆ, ಅಂದು ಕೂಡ ಇಂಗ್ಲೆಂಡ್‌ ಇನ್ನಿಂಗ್ಸ್‌ ಜಯ ಸಾಧಿಸಿತ್ತು. ವೇಗಿಯೋರ್ವ 21 ವರ್ಷಗಳ ಕಾಲ ಟೆಸ್ಟ್‌ ಆಡಿದ್ದು, 42ನೇ ವಯಸ್ಸಿನ ತನಕವೂ ಫಿಟ್‌ನೆಸ್‌ ಹಾಗೂ ಲಯವನ್ನು ಕಾಯ್ದುಕೊಂಡು ಬಂದದ್ದು ಆ್ಯಂಡರ್ಸನ್‌ ಹಿರಿಮೆಗೆ ಸಾಕ್ಷಿ.

ಅಟ್ಕಿನ್ಸನ್‌ಗೆ ಮತ್ತೆ 5 ವಿಕೆಟ್‌
ಜೇಮ್ಸ್‌ ಆ್ಯಂಡರ್ಸನ್‌ ವಿದಾಯ ಪಂದ್ಯದಲ್ಲೇ ಟೆಸ್ಟ್‌ ಪದಾರ್ಪಣೆ ಮಾಡಿದ ಗಸ್‌ ಅಟ್ಕಿನ್ಸನ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೆ 5 ವಿಕೆಟ್‌ ಕಿತ್ತು ವೆಸ್ಟ್‌ ಇಂಡೀಸನ್ನು ಸಂಕಷ್ಟಕ್ಕೆ ತಳ್ಳಿದರು. ಈ ಪಂದ್ಯದಲ್ಲಿ ಅಟಿRನ್ಸನ್‌ ಸಾಧನೆ 106ಕ್ಕೆ 12 ವಿಕೆಟ್‌. ಇದು ಪದಾರ್ಪಣ ಟೆಸ್ಟ್‌ ಪಂದ್ಯದಲ್ಲಿ ಪೇಸ್‌ ಬೌಲರ್‌ ಒಬ್ಬರ 3ನೇ ಅತ್ಯುತ್ತಮ ಸಾಧನೆಯಾಗಿದೆ. ಹಾಗೆಯೇ 1946ರ ಬಳಿಕ ತವರಿನ ಟೆಸ್ಟ್‌ ಪಂದ್ಯದಲ್ಲಿ 10 ಪ್ಲಸ್‌ ವಿಕೆಟ್‌ ಉರುಳಿಸಿದ ಇಂಗ್ಲೆಂಡ್‌ನ‌ ಮೊದಲ ಬೌಲರ್‌ ಆಗಿಯೂ ಮೂಡಿಬಂದರು. ಅಂದಿನ ಸಾಧಕ ಅಲೆಕ್‌ ಬೆಡ್‌ಸರ್‌.

Advertisement

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-121 ಮತ್ತು 136 (ಮೋಟಿ 31, ಅಥನಾಜ್‌ 22, ಹೋಲ್ಡರ್‌ 20, ಅಟಿRನ್ಸನ್‌ 61ಕ್ಕೆ 5, ಆ್ಯಂಡರ್ಸನ್‌ 32ಕ್ಕೆ 3, ಸ್ಟೋಕ್ಸ್‌ 25ಕ್ಕೆ 2). ಇಂಗ್ಲೆಂಡ್‌-371. ಪಂದ್ಯಶ್ರೇಷ್ಠ: ಗಸ್‌ ಅಟ್ಕಿನ್ಸನ್‌.

40 ಸಾವಿರ ಎಸೆತವಿಕ್ಕಿದ ಮೊದಲಿಗ
ಎರಡೂ ತಂಡಗಳಿಂದ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಶುಕ್ರವಾರದ ಮೊದಲ ಓವರ್‌ ಎಸೆಯಲು ಬಂದ ಆ್ಯಂಡರ್ಸನ್‌ ವಿಶಿಷ್ಟ ಮೈಲುಗಲ್ಲು ನೆಟ್ಟರು. ಟೆಸ್ಟ್‌ ಇತಿಹಾಸದಲ್ಲಿ 40 ಸಾವಿರ ಎಸೆತಗಳನ್ನಿಕ್ಕಿದ ವಿಶ್ವದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರನ್‌-ಅಪ್‌ ದೂರವನ್ನು 12 ಮೀಟರ್‌ ಪ್ರಕಾರ ಲೆಕ್ಕ ಹಾಕಿದರೆ, ಟೆಸ್ಟ್‌ ಬೌಲಿಂಗ್‌ ವೇಳೆ ಅಂದಾಜು 480 ಕಿ.ಮೀ. ಓಡಿದ ಸಾಹಸ ಆ್ಯಂಡರ್ಸನ್‌ ಅವರದ್ದಾಗಿದೆ. ಇದೂ ಒಂದು ದಾಖಲೆ!

Advertisement

Udayavani is now on Telegram. Click here to join our channel and stay updated with the latest news.

Next