Advertisement

ಪುನೀತ್‌ ಗೆ ಇಂದು ಜನ್ಮದಿನದ ಸಂಭ್ರಮ

08:47 AM Mar 17, 2021 | Team Udayavani |

ಬೆಂಗಳೂರು: ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಿಗೆ ಇಂದು (ಮಾ. 17) ಜನ್ಮದಿನದ ಸಂಭ್ರಮ. ಪ್ರತಿವರ್ಷ ಪುನೀತ್‌ ರಾಜಕುಮಾರ್‌ ಜನ್ಮದಿನವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಕಳೆದ ವರ್ಷದಿಂದ ಪುನೀತ್‌ ರಾಜಕುಮಾರ್‌ ಅದ್ಧೂರಿ ಜನ್ಮದಿನಕ್ಕೆ ಕೊರೋನಾ ಅಡ್ಡಿಯಾಗಿದೆ.

Advertisement

ಕಳೆದ ವರ್ಷ ಮಾರ್ಚ್‌ ವೇಳೆಗೆ ಕೊರೋನಾ ಸೋಂಕು ದೇಶದೆಲ್ಲೆಡೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದರಿಂದ, ಪುನೀತ್‌ ರಾಜಕುಮಾರ್‌ ತಮ್ಮ ಅಭಿಮಾನಿಗಳಿಗೆ ಮನೆಯಿಂದ ಹೊರಬಂದು ಸಾರ್ವಜನಿಕವಾಗಿ, ಅದ್ಧೂರಿ ಬರ್ತ್‌ಡೇ ಸಂಭ್ರಮ ಆಚರಿಸದಂತೆ ಮನವಿ ಮಾಡಿದ್ದರು. ಅದರಂತೆ ತಮ್ಮ ನೆಚ್ಚಿನ ನಟನ ಮನವಿಗೆ ಸ್ಪಂದಿಸಿದ್ದ ಅಪ್ಪು ಫ್ಯಾನ್ಸ್‌ ಕೂಡ ಸರಳವಾಗಿ, ಸೋಶಿಯಲ್‌ ಮಿಡಿಯಾಗಳನ್ನೇ ವೇದಿಕೆ ಮಾಡಿಕೊಂಡು ಪವರ್‌ಸ್ಟಾರ್‌ ಬರ್ತ್‌ಡೇ ಆಚರಿಸಿ ಸಂಭ್ರಮಿಸಿದ್ದರು.

ಇನ್ನು ಈ ಬಾರಿಯಾದರೂ ಅಪ್ಪು ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿರು ವಾಗಲೇ, ಕೊರೋನಾದ ಎರಡನೇ ಅಲೆಯ ಆತಂಕ ಎದುರಾಗಿದೆ.

ಇದನ್ನೂ ಓದಿ: ಮತ್ತೆ ರಾತ್ರಿ ಕರ್ಫ್ಯೂ ಜಪ : ಮುಂಬಯಿ, ಪುಣೆ ಬಳಿಕ ಮ.ಪ್ರದೇಶ, ಗುಜರಾತ್‌ನಲ್ಲೂ ಜಾರಿ

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಮತ್ತೂಮ್ಮೆ ಲಾಕ್‌ಡೌನ್‌ ಆತಂಕ ಎದುರಾಗಿದೆ. ಮತ್ತೊಂದೆಡೆ, ಸರ್ಕಾರ ಕೂಡ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಜನರ ಆರೋಗ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಯಿಂದ ಈ ಬಾರಿಯೂ ಪುನೀತ್‌ ರಾಜಕುಮಾರ್‌ ತಮ್ಮ ಹುಟ್ಟುಹಬ್ಬವನ್ನು ಆದಷ್ಟು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ.

Advertisement

ತಮ್ಮ ಜನ್ಮದಿನಕ್ಕೂ ಎರಡು ದಿನಗಳ ಮುಂಚೆಯೇ ಸೋಶಿಯಲ್‌ ಮೀಡಿಯಾದಲ್ಲಿ ಲೈವ್‌ ಬಂದಿರುವ ಪುನೀತ್‌ ರಾಜಕುಮಾರ್‌, “ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ನನ್ನ ಜನ್ಮದಿನದಂದು ನಾನು ಮನೆಯಲ್ಲಿ ಇರುವುದಿಲ್ಲ. ಕುಟುಂಬ ದೊಂದಿಗೆ ದೇವಾಲಯಕ್ಕೆ ತೆರಳಲಿದ್ದೇನೆ.. ಹಾಗಾಗಿ ಯಾರೂ ಮನೆಗೆ ಬರುವುದು ಬೇಡ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಇನ್ನು ಪುನೀತ್‌ ರಾಜಕುಮಾರ್‌ ಮನವಿಗೆ ಸ್ಪಂದಿಸಿರುವ ಅಭಿಮಾನಿಗಳು, ಈ ಬಾರಿಯೂ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ. ಬರ್ತ್ ಡೇ ಪ್ರಯುಕ್ತ ವಿಶೇಷ ಸಿಡಿಪಿ ವಿನ್ಯಾಸಗೊಳಿಸಿರುವ ಅಪ್ಪು ಫ್ಯಾನ್ಸ್‌, ಅದನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಪವರ್‌ಸ್ಟಾರ್‌ಗೆ ಜನ್ಮದಿನದ ಶುಭಾಶಯ ಕೋರಲು ಮುಂದಾಗಿದ್ದಾರೆ.

ಅಲ್ಲದೆ ಪುನೀತ್‌ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಸಸಿ ನೆಡುವುದು, ಬಡವರಿಗೆ ಆಹಾರ ಕಿಟ್‌ ವಿತರಣೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ಔಷಧಿ ವಿತರಣೆ, ಉಚಿತ ವೈದ್ಯಕೀಯ ತಪಾಸಣೆ, ಅನ್ನದಾನ ಹೀಗೆ ಒಂದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  ಬಾಲಸುಟ್ಟ ಶಿವಸೇನೆ ಹುಲಿ : ಬೆಳಗಾವಿ ಕೇಂದ್ರಾಡಳಿತವಾಗದು ಎಂದು ಕೇಂದ್ರ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next