ಚಂದನವನಕ್ಕೆ ‘ಪ್ರೇಮದ ಕಾಣಿಕೆ’ಯಂತೆ ಕಾಲಿಟ್ಟ ನಟ ಪುನೀತ್ ರಾಜಕುಮಾರ್ ಅವರ ಸಿನಿ ಪಯಣಕ್ಕೆ ಇದೀಗ 45 ವಸಂತಗಳ ಸಂಭ್ರಮ.
ಪುನೀತ್ ಅವರು 1976ರಲ್ಲಿ ತೆರೆಕಂಡ ‘ಪ್ರೇಮದ ಕಾಣಿಕೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ಆಗಿನ್ನೂ ಅವರ ವಯಸ್ಸು ಕೇವಲ 6 ತಿಂಗಳು. ಬಾಲ ನಟನಾಗಿಯೇ ಬೆಳ್ಳಿ ಪರದೆ ಮೇಲೆ ಮಿಂಚು ಹರಿಸಿದ ಅಪ್ಪು, ಸನಾದಿ ಅಪ್ಪಣ್ಣ, ವಸಂತ ಗೀತಾ, ಬೆಟ್ಟದ ಹೂವು,ಭಾಗ್ಯವಂತ, ಚಲಿಸುವ ಮೋಡಗಳು,ಎರಡು ನಕ್ಷತ್ರಗಳು, ಭಕ್ತ ಪ್ರಲ್ಹಾದ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಬಾಲ ನಟನಾಗಿ ಅಭಿನಯಿಸಿದ್ದಾರೆ. ‘ಬೆಟ್ಟದ ಹೂವು’ (1985) ಚಿತ್ರದ ರಾಮು ಪಾತ್ರದ ಅಮೋಘ ಅಭಿನಯಕ್ಕೆ ರಾಷ್ಟ್ರೀಯ ಪಶಸ್ತಿ ಬಾಚಿದ ಹಿರಿಮೆ ಪುನೀತ್ ಅವರದು. ಇದರ ಜತೆಗೆ ಚಲಿಸುವ ಮೋಡಗಳು ಹಾಗೂ ಎರಡು ನಕ್ಷತ್ರಗಳು ಸಿನಿಮಾದಲ್ಲಿಯ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ.
ಬಾಲ್ಯದಲ್ಲಿಯೇ ಬಣ್ಣದ ನಂಟು ಅಂಟಿಸಿಕೊಂಡು ಅಭಿನಯ ಕರಗತ ಮಾಡಿಕೊಂಡ ಪುನೀತ್ ರಾಜಕುಮಾರ್, 2002 ರಲ್ಲಿ ‘ಅಪ್ಪು’ ಸಿನಿಮಾ ಮೂಲಕ ಪೂರ್ಣಪ್ರಮಾಣದ (ಫುಲ್ ಪ್ಲೆಡ್ಜ್) ನಾಯಕರಾಗಿ ಚಂದನವನಕ್ಕೆ ಪರಿಚಯವಾದರು. ಅಭಿ, ಅಕಾಶ್, ವೀರ್ ಕನ್ನಡಿಗ, ಮೌರ್ಯ , ಅಜಯ್ , ಅರಸು ಹೀಗೆ ಅವರು ನಟಿಸಿದ ಸಾಲು ಸಾಲು ಚಿತ್ರಗಳು ಶತಕ ಬಾರಿಸಿ ಇತಿಹಾಸ ನಿರ್ಮಿಸಿವೆ.
ಪ್ರೇಮದ ಕಾಣಿಕೆಯಿಂದ ಶುರುವಾದ ಅಪ್ಪು ಅವರ ಸಿನಿ ಪಯಣ ಇದೀಗ 45 ವರ್ಷಗಳಿಗೆ ಬಂದು ನಿಂತಿದೆ. ಈ ಸುಂದರ ಕ್ಷಣವನ್ನು ಇಡೀ ಕನ್ನಡ ಚಿತ್ರರಂಗದ ಸಡಗರದಿಂದ ಸಂಭ್ರಮಿಸುತ್ತಿದೆ. ಪುನೀತ್ ಅವರ ಹೊಸ ಸಿಡಿಪಿ ( ಕಾಮನ್ ಡಿಪಿ) ರಿಲೀಸ್ ಮಾಡಲಾಗಿದೆ. ನಟ ಕಿಚ್ಚ ಸುದೀಪ್, ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ಹಿರಿಯ ನಟರು-ನಟಿಯರು ಹಾಗೂ ನಿರ್ದೇಶಕರು ರಾಜಕುಮಾರನಿಗೆ ಅಭಿನಂದನೆ ತಿಳಿಸಿದ್ದಾರೆ.