ರಾಯಚೂರು: ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಬಿಸಿಲೂರು ಎಂದೇ ಖ್ಯಾತಿ ಪಡೆದ ರಾಯಚೂರಿಗೂ ಬಂದಿದ್ದರು. ಅವರ ಅಭಿನಯಿಸಿದ ದೊಡ್ಮನೆ ಹುಡುಗ ಚಿತ್ರದ ಪ್ರಚಾರಕ್ಕಾಗಿ 2016ರ ಅ.12ರಂದು ಪ್ರಥಮ ಬಾರಿಗೆ ರಾಯಚೂರು ನಗರಕ್ಕೆ ಆಗಮಿಸಿದ್ದರು.
ವಿಧಿಯಾಟ ಅದುವೇ ಅವರ ಕೊನೆ ಭೇಟಿ ಕೂಡ ಆಯಿತು. ಅಪ್ಪು ಬರುವ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಮೂಲೆ- ಮೂಲೆಯಿಂದಲೂ ಜನ ಆಗಮಿಸಿದ್ದರು. ನಗರದ ಮಹಾತ್ಮ ಗಾಂಧಿ ವೃತ್ತದಿಂದ ಎಸ್ ಎನ್‌ಟಿ ಚಿತ್ರಮಂದಿರ ದವರೆಗೂ ಜನ ಕಿಕ್ಕಿರಿದು ಹೋಗಿತ್ತು. ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣವಾಗಿದ್ದರು.
ಗಾಂಧಿ ವೃತ್ತದಲ್ಲಿನ ಶ್ರೀ ಹನುಮಾನ ದೇವಸ್ಥಾನದಲ್ಲಿ ಚಿತ್ರತಂಡ ವಿಶೇಷ ಪೂಜೆ ನೆರವೇರಿಸಿತ್ತು. ಕರ್ನಾಟಕ ಹುಡಗರ ಸಂಘ ಹಾಗೂ ಅಖೀಲ ಕರ್ನಾಟಕ ಡಾ| ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು, ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರಿಗೂ ಅದ್ಧೂರಿ ಸ್ವಾಗತ ನೀಡಿದ್ದರು. ರಾಜ್ ಕುಟುಂಬದ ಸದಸ್ಯ ಪುನೀತ್ ರಾಜ್ ಕುಮಾರ್ ಮೊದಲ ಬಾರಿಗೆ ನೋಡಲು ಜನರಲ್ಲೂ ಸಂಭ್ರಮ ಮನೆ ಮಾಡಿತ್ತು.
ಇದನ್ನೂ ಓದಿ: ಅಪ್ಪು ಅಂತಿಮ ರ‍್ಶನದಲ್ಲಿ ನಟ ಬಾಲಕೃಷ್ಣ ಮತ್ತು ನಟ ಪ್ರಭುದೇವ
ಮಹಾತ್ಮಗಾಂಧಿ ದೇವಸ್ಥಾನದಿಂದ ಚಿತ್ರಮಂದಿರದವೆಗೆ ಪುನೀತ್ ರಾಜ್ ಕುಮಾರ್ ವಾಹನ ಹೋಗಲು ಬಿಡದಂತೆ ಅಭಿಮಾನಿಗಳು ಅಭಿಮಾನ ಮೆರೆದಿದ್ದರು. ಕೊನೆಗೆ ಚಿತ್ರಮಂದಿರ ಮೇಲೆ ಹತ್ತಿದ ಅಪ್ಪು, ಅಲ್ಲಿಂದಲೇ ಅಭಿಮಾನಿಗಳತ್ತ ಕೈ ಬೀಸಿ ಅಭಿನಂದನೆ ಸಲ್ಲಿಸಿದ್ದರು. ಬಳಿಕ ದೇವದುರ್ಗದ ಮೂಲಕ ಬೇರೆ ಕಡೆ ಹೋಗಿದ್ದರು. ಸಾಕಷ್ಟು ಬಾರಿ ಮಂತ್ರಾಲಯಕ್ಕೆ ಬರುತ್ತಿದ್ದ ಕಾರಣ ಜಿಲ್ಲೆಯ ಜನ ಅವರನ್ನು ಅಲ್ಲಿಯೇ ಕಣ್ತುಂಬಿಕೊಳ್ಳುವುದು, ಅವರ ಜತೆ ಸೇಲ್ಫಿ ತೆಗೆದುಕೊಂಡು ಖುಷಿ ಪಡುತ್ತಿದ್ದರು.