– ಹೀಗೆ ಹೇಳಿ ತಮ್ಮ ಎಂದಿನ ಶೈಲಿಯ ನಗು ಹೊರಹಾಕಿದರು ಪುನೀತ್‌ರಾಜಕುಮಾರ್. ಪುನೀತ್ ಈಗ ಬಿಝಿ. ಒಂದು ಕಡೆ ನಟನೆ, ಇನ್ನೊಂದು ಕಡೆ ನಿರ್ಮಾಣ ಮತ್ತೂಂದು ಕಡೆ ಜನಪ್ರಿಯಗೊಂಡಿರುವ “ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ. ಹೀಗೆ ಒಂದಲ್ಲ ಒಂದು ವಿಭಾಗದಲ್ಲಿ ಸದಾ ಉತ್ಸಾಹದ ಮೊಗದಲ್ಲೇ ತಮ್ಮನ್ನು ತೊಡಗಿಸಿಕೊಂಡಿರುವ ಪುನೀತ್‌ರಾಜಕುಮಾರ್‌ಗೆ “ಕವಲುದಾರಿ’ ಕೈ ಹಿಡಿದ ಖುಷಿ. ಅಷ್ಟೇ ಅಲ್ಲ, ಆ ಚಿತ್ರದ ಮೂಲಕ ಇನ್ನಷ್ಟು ಧೈರ್ಯವೂ ಬಂದಿದೆ. ಅವರ “ಕವಲುದಾರಿ’ ಗೆಲುವು, ಮುಂದಿನ ಚಿತ್ರಗಳ ನಿರ್ಮಾಣ, ಕಿರುತೆರೆ ಜರ್ನಿ ಇತ್ಯಾದಿ ಕುರಿತು ಸ್ವತಃ ಪುನೀತ್‌ರಾಜಕುಮಾರ್ ಒಂದಷ್ಟು ಮಾತನಾಡಿದ್ದಾರೆ.
Advertisement
“ಕವಲುದಾರಿ’ ಮೂಲಕ ನಿರ್ಮಾಣದಲ್ಲಿ ಹೊಸ “ದಾರಿ’ ಕಂಡುಕೊಂಡಿರುವ ಪುನೀತ್, ಆ ಬಗ್ಗೆ ಏನೇಳ್ತಾರೆ ಗೊತ್ತಾ? “ಈ ವರ್ಷ ನನ್ನ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣಗೊಂಡ ಮೊದಲ ಚಿತ್ರ “ಕವಲುದಾರಿ’ ಗೆಲುವು ಕೊಟ್ಟಿದೆ. ಅದು ನನ್ನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮೊದಲ ಪ್ರೊಡಕ್ಷನ್ ಮೂಲಕ ಮಾಡಿದ ಹೊಸ ಪ್ರಯತ್ನಕ್ಕೆ ಗೆಲುವು ಸಿಕ್ಕಿದೆ. ಇದು ಇಡೀ ಟೀಮ್‌ಗೆ ಸಿಗಬೇಕಾದ ಗೆಲುವು. ನಿರ್ದೇಶಕ ಹೇಮಂತ್, ಹೀರೋ ರಿಷಿ, ಅನಂತ್‌ನಾಗ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ಹೇಳ್ತೀನಿ. ಇದೆಲ್ಲವೂ ಅವರ ಬದ್ಧತೆಯಿಂದ ಆಗಿದ್ದು, ಹೊಸ ಪ್ರಯತ್ನಕ್ಕೆ ಸರಿಯಾದ ಬೆಂಬಲವೂ ಸಿಕ್ಕಿದೆ. ಒಳ್ಳೆಯ ತಂಡದಿಂದ ಒಳ್ಳೆಯ ಸಿನಿಮಾ ಕೊಡಲು ಸಾಧ್ಯ ಎಂಬುದು ಸಾಬೀತಾಗಿದೆ’ ಎನ್ನುತ್ತಾರೆ ಅವರು.
Related Articles
Advertisement
“ರಾಜಕುಮಾರ’ ಮೂಲಕ ಯಶಸ್ಸು ಕಂಡ ತಂಡದ ಜೊತೆ ಪುನೀತ್ “ಯುವರತ್ನ’ ಚಿತ್ರ ಮಾಡುತ್ತಿದ್ದಾರೆ. ಅದಾಗಲೇ ಆ ಚಿತ್ರ ಶೇ.40 ರಷ್ಟು ಚಿತ್ರೀಕರಣವಾಗಿದೆ. ಆ ಬಗ್ಗೆ ಹೇಳಿಕೊಳ್ಳುವ ಅವರು, “ಈಗಾಗಲೇ ಮೈಸೂರಿನಲ್ಲಿ ಒಂದು ಶೆಡ್ನೂಲ್ ಪೂರ್ಣಗೊಂಡಿದೆ. ಮುಂದೆ ಧಾರವಾಡದಲ್ಲಿ ಚಿತ್ರೀಕರಣ ನಡೆಯಲಿದೆ. ಒಳ್ಳೆಯ ಅನುಭವ ಆಗಿದೆ. ಕಾಲೇಜ್‌ನ ಸುಮಾರು 200 ಜನ ಸ್ಟುಡೆಂಟ್ಸ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಯಾರಿಗೆಲ್ಲಾ ನಟನೆಯ ಆಸಕ್ತಿ ಇದೆಯೋ ಅವರೆಲ್ಲರೂ “ಯುವರತ್ನ’ದಲ್ಲಿ ಇರಲಿದ್ದಾರೆ. ಈ ವರ್ಷವೇ ಬಿಡುಗಡೆಯಾಗಲಿದೆಯಾ ಎಂಬ ಬಗ್ಗೆ ಐಡಿಯಾ ಇಲ್ಲ. ಕಾದು ನೋಡಬೇಕು ಎನ್ನುತ್ತಾರೆ.
ಪುನೀತ್ ನಿರ್ಮಾಪಕರಾಗಿ ಆಯ್ಕೆ ಮಾಡುವ ಚಿತ್ರಗಳ ಮಾನದಂಡ ಹೇಗೆ? ಅದಕ್ಕೂ ಉತ್ತರಿಸುವ ಅವರು, “ನೋಡಿ ಒಂದು ಟೀಮ್ ಬಂದು ಒಳ್ಳೆಯ ಕಾನ್ಸೆಪ್ಟ್ ಹೇಳಿ, ಅವರದೇ ಆದ ಶೈಲಿಯಲ್ಲಿ ಅದನ್ನು ತಕ್ಕಮಟ್ಟಿಗೆ ಮೇಕಿಂಗ್ ಮಾಡಿಕೊಂಡು ಬಂದು ತೋರಿಸಿದರೆ, ಅಲ್ಲೇನೋ ವಿಶೇಷತೆ ಇದೆ ಎನಿಸಿದರೆ ಖಂಡಿತ ಮಾಡ್ತೀನಿ. ಈಗ ಯಾರೂ ಬಂದು ಕಥೆ ಹೇಳುವ ಅಗತ್ಯವಿಲ್ಲ. ಈಗಂತೂ ಡಿಜಿಟಲ್ ಯುಗ ಮೊಬೈಲ್‌ನಲ್ಲೇ ಅವರು ಅಂದುಕೊಂಡ ಹೊಸ ಕಾನ್ಸೆಪ್ಟ್ ಶೂಟ್ ಮಾಡಿ, ಥ್ರಿಲ್ ಎನಿಸುವಂತೆ ತುಣುಕು ದೃಶ್ಯಗಳನ್ನು ತೋರಿಸಿದರೆ ಸಾಕು. ಎಲ್ಲೋ ಒಂದು ಕಡೆ ಮಾಡಿದ ಪ್ರಯತ್ನಕ್ಕೆ ಖಂಡಿತ ಸಹಕಾರ ಸಿಕ್ಕೇ ಸಿಗುತ್ತದೆ. ನನ್ನ ಬ್ಯಾನರ್‌ನಲ್ಲಿ ಬೇರೆ ಸಿನಿಮಾ ನಿರ್ಮಾಣದ ಜೊತೆಗೆ ನನ್ನ ನಟನೆಯಲ್ಲೂ ಆದಷ್ಟು ಬೇಗ ಚಿತ್ರವೊಂದನ್ನು ಮಾಡುತ್ತೇನೆ’ ಎನ್ನುವ ಅವರಿಗೆ ನಟನೆ, ನಿರ್ಮಾಣದ ಜೊತೆಗೆ ಯಾಕೆ ವಿತರಣೆಯ ಕಡೆಯೂ ಗಮನಹರಿಸಬಾರದು ಎಂಬ ಪ್ರಶ್ನೆಗೆ, “ನೋಡೋಣ, ದೇವರ ದಯೆ ಇದ್ದರೆ, ಅದೂ ಮಾಡಬಹುದು’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಪುನೀತ್.
ವಿಜಯ್ ಭರಮಸಾಗರ