Advertisement

“ಮಾಯಾಬಜಾರ್‌’ನಲ್ಲಿ ಪುನೀತ್‌

10:25 AM Aug 30, 2019 | Lakshmi GovindaRaj |

ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಈಗ ಕೇವಲ ನಾಯಕ ಮತ್ತು ಗಾಯಕ ಮಾತ್ರವಲ್ಲ. ಅವರು ಸದಭಿರುಚಿ ಚಿತ್ರ ನಿರ್ಮಾಪಕರು ಕೂಡ ಹೌದು. ಈಗಾಗಲೇ ತಮ್ಮ “ಪಿಆರ್‌ಕೆ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ “ಕವಲುದಾರಿ’ ಚಿತ್ರವನ್ನು ನಿರ್ಮಿಸಿ, ಸೈ ಎನಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಈಗ ತಮ್ಮ ಬ್ಯಾನರ್‌ನ ಎರಡನೇ ಚಿತ್ರ “ಮಾಯಾ ಬಜಾರ್‌’ನ್ನು ನಿರ್ಮಿಸುತ್ತಿರುವ ವಿಷಯ ಹೊಸದೇನಲ್ಲ.

Advertisement

ಸದ್ಯಕ್ಕೆ “ಮಾಯಾ ಬಜಾರ್‌’ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದ್ದು, ಇದರ ನಡುವೆಯೇ ಅವರು ತಮ್ಮ ನಿರ್ಮಾಣದ “ಮಾಯಾ ಬಜಾರ್‌’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಹೊರಬಿದ್ದಿದೆ. ಹೌದು, ಒಂದು ಕಡೆ ಪುನೀತ್‌ ರಾಜಕುಮಾರ್‌ ಸದ್ಯ “ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಝಿಯಾಗಿದ್ದರೂ, ಇದೇ ಗ್ಯಾಪ್‌ನಲ್ಲಿ ಅವರು ತಮ್ಮದೇ ನಿರ್ಮಾಣದ “ಮಾಯಾ ಬಜಾರ್‌’ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೆ, “ಮಾಯಾ ಬಜಾರ್‌’ ಚಿತ್ರದಲ್ಲಿ ರಾಜ್‌. ಬಿ ಶೆಟ್ಟಿ, ವಸಿಷ್ಠ ಸಿಂಹ, ಸುಧಾರಾಣಿ, ಪ್ರಕಾಶ್‌ ರಾಜ್‌, ಚೈತ್ರಾ ರಾವ್‌ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ದೊಡ್ಡ ತಾರಾಬಳಗವಿರುವ ಈ ಚಿತ್ರದಲ್ಲಿ ಈಗ ಪುನೀತ್‌ ರಾಜಕುಮಾರ್‌ ಅವರು ಚಿತ್ರದ ಒಂದು ಪ್ರಮುಖ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇನ್ನು ಈ ಹಾಡಿಗೆ ಎ. ಹರ್ಷ ನೃತ್ಯ ಸಂಯೋಜನೆ ಮಾಡುತ್ತಿದ್ದು, “ಮಾಯಾ ಬಜಾರ್‌’ನಲ್ಲಿ ಅಪ್ಪು ಸ್ಟೆಪ್ಸ್‌ ನೋಡಬಹುದು ಎನ್ನಲಾಗುತ್ತಿದೆ. ಇನ್ನು “ಮಾಯಾ ಬಜಾರ್‌’ ಚಿತ್ರಕ್ಕೆ ರಾಧಾಕೃಷ್ಣ ರೆಡ್ಡಿ ಅವರು ನಿರ್ದೇಶನ ಮಾಡುತ್ತಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ “ಮಾಯಾ ಬಜಾರ್‌’ ನವೆಂಬರ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next