Advertisement

ಇಂದಿನಿಂದ ಪುಣೆ ಟೆಸ್ಟ್‌ ಪಂದ್ಯ: ಆಯ್ಕೆಯ ಗೊಂದಲದಲ್ಲಿ ಟೀಮ್‌ ಇಂಡಿಯಾ

11:25 PM Oct 23, 2024 | Team Udayavani |

ಪುಣೆ: ಬೆಂಗಳೂರಿನ ಮೊದಲ ಟೆಸ್ಟ್‌ ಪಂದ್ಯವನ್ನು ಕೈಯಾರೆ ಕಳೆದುಕೊಂಡ ಭಾರತವೀಗ ನ್ಯೂಜಿಲ್ಯಾಂಡ್‌ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯವನ್ನು ತೀವ್ರ ಒತ್ತಡ ದಲ್ಲಿ ಆಡಬೇಕಾದ ಸ್ಥಿತಿಯಲ್ಲಿದೆ. ಗುರುವಾರ ಪುಣೆಯ “ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ’ನಲ್ಲಿ ಈ ಪಂದ್ಯ ಆರಂಭವಾಗಲಿದ್ದು, ಸಶಕ್ತ ಹನ್ನೊಂದರ ಬಳಗದ ಆಯ್ಕೆ ಆತಿಥೇಯರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Advertisement

3 ಪಂದ್ಯಗಳ ಈ ಸರಣಿಯನ್ನು ಮುಗಿಸಿ ಆಸ್ಟ್ರೇಲಿಯಕ್ಕೆ ಪ್ರವಾಸ ಹೊರಡಬೇಕಿರುವ ಟೀಮ್‌ ಇಂಡಿಯಾ ಪಾಲಿಗೆ ಪುಣೆ ಹಾಗೂ ಅನಂತರದ ಮುಂಬಯಿ ಟೆಸ್ಟ್‌ ಪಂದ್ಯ ಗಳು ನಿಜಕ್ಕೂ ಸವಾಲಿನದ್ದಾಗಿವೆ. ಮೊದಲ ಟೆಸ್ಟ್‌ ಪಂದ್ಯವನ್ನು ಕಳೆದು ಕೊಂಡ ಬಳಿಕ ಭರ್ಜರಿಯಾಗಿಯೇ ಸರಣಿಗೆ ಮರಳಿದ ಅದೆಷ್ಟೋ ನಿದರ್ಶನಗಳು ಭಾರತದ ಮುಂದಿವೆ. ಇದಕ್ಕೆ ತಾಜಾ ಉದಾ ಹರಣೆ ಕಳೆದ ಇಂಗ್ಲೆಂಡ್‌ ಎದುರಿನ 5 ಪಂದ್ಯಗಳ ಸರಣಿ. ಇಲ್ಲಿ ಮೊದಲ ಟೆಸ್ಟ್‌ ಸೋತ ಭಾರತ, ಅನಂತರದ ನಾಲ್ಕೂ ಪಂದ್ಯಗಳನ್ನು ಗೆದ್ದು ಸರಣಿಯನ್ನು 4-1ರಿಂದ ವಶಪಡಿಸಿಕೊಂಡಿದ್ದನ್ನು ಮರೆಯುವಂತಿಲ್ಲ. ಇದು ನ್ಯೂಜಿಲ್ಯಾಂಡ್‌ ಪಾಲಿಗೊಂದು ಎಚ್ಚರಿಕೆಯ ಗಂಟೆ.

ತಪ್ಪುಗಳನ್ನು ತಿದ್ದಬೇಕಿದೆ
ಪುಣೆ ಟೆಸ್ಟ್‌ ಗೆಲ್ಲಬೇಕಾದರೆ ಬೆಂಗಳೂರಿ ನಲ್ಲಿ ಮಾಡಿದ ಅಷ್ಟೂ ತಪ್ಪುಗಳನ್ನು ತಿದ್ದಿ ಕೊಂಡು ಮುನ್ನಡೆಯುವುದು ಅತೀ ಅಗತ್ಯ. ಒಂದರ್ಥದಲ್ಲಿ ಹೇಳುವುದಾದರೆ, ಬೆಂಗಳೂರು ಟೆಸ್ಟ್‌ ಪಂದ್ಯವನ್ನು ನಮ್ಮವರೇ ಕೈಯಾರೆ ಪ್ರವಾಸಿಗರಿಗೆ ಒಪ್ಪಿಸಿದ್ದು. ಮಳೆಯಿಂದ ಜರ್ಜರಿತಗೊಂಡ ಟ್ರ್ಯಾಕ್‌ ಮೇಲೆ ಅದೃಷ್ಟದ ಟಾಸ್‌ ಗೆದ್ದೂ ಬ್ಯಾಟಿಂಗ್‌ ಆಯ್ದುಕೊಂಡ ರೋಹಿತ್‌ ಶರ್ಮ ನಿರ್ಧಾರ ಸೋಲಿನ ಮೊದಲ ಮೆಟ್ಟಿಲಾಗಿತ್ತು. ಕಿವೀಸ್‌ ತ್ರಿವಳಿ ವೇಗಿಗಳ ದಾಳಿ 46ಕ್ಕೆ ಆಲೌಟಾಗುವಷ್ಟು ಘಾತಕವಾಗೇನೂ ಇರಲಿಲ್ಲ.

ದ್ವಿತೀಯ ಸರದಿಯಲ್ಲಿ ಭಾರತ ದಿಟ್ಟ ಬ್ಯಾಟಿಂಗ್‌ ಪ್ರದರ್ಶನವನ್ನೇ ನೀಡಿತು. ಸಫ‌ìರಾಜ್‌, ಪಂತ್‌, ಕೊಹ್ಲಿ ಅವರೆಲ್ಲ ಕ್ರೀಸ್‌ ಆಕ್ರಮಿಸಿಕೊಂಡು ಮೊತ್ತವನ್ನು 400ರ ಗಡಿ ದಾಟಿಸಿದರು. ಆದರೆ ರಾಹುಲ್‌, ಜಡೇಜ, ಅಶ್ವಿ‌ನ್‌ ಇದೇ ಲಯದಲ್ಲಿ ಸಾಗಿದ್ದೇ ಆದರೆ ಪಂದ್ಯವನ್ನು ಖಂಡಿತವಾಗಿಯೂ ಉಳಿಸಿಕೊಳ್ಳಬಹುದಾಗಿತ್ತು. ಆಗ ಜುಜುಬಿ 46 ರನ್‌ ಮಾಡಿಯೂ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡ ಹೆಗ್ಗಳಿಕೆ ಭಾರತದ್ದಾಗುತ್ತಿತ್ತು.

ಗಿಲ್‌ ಬರಲಿದ್ದಾರೆ…
ತವರಿನ ಅಂಗಳದಲ್ಲೇ ಕೆ.ಎಲ್‌. ರಾಹುಲ್‌ ವಿಫ‌ಲರಾದದ್ದು ಭಾರತಕ್ಕೆ ಎದುರಾದ ದೊಡ್ಡ ಹಿನ್ನಡೆ. ಇವರು ಪುಣೆ ಟೆಸ್ಟ್‌ನಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ. ಶುಭಮನ್‌ ಗಿಲ್‌ ಮರಳುವುದೂ ಇದಕ್ಕೊಂದು ಕಾರಣ. ಗಿಲ್‌ ಅವರಿಗಾಗಿ ಬೆಂಗಳೂರಿನಲ್ಲಿ 150 ರನ್‌ ಬಾರಿಸಿದ ಸಫ‌ìರಾಜ್‌ ಅವರನ್ನು ಹೊರಗಿಡುವುದು ಯಾವ ಕಾರಣಕ್ಕೂ ಸೂಕ್ತವೆನಿಸದು. ಸಫ‌ìರಾಜ್‌ ಕಳೆದ ಇರಾನಿ ಕಪ್‌ ಪಂದ್ಯದಲ್ಲೂ ಅಜೇಯ 222 ರನ್‌ ಬಾರಿಸಿ ಮೆರೆದಿದ್ದರು.
ರಿಷಭ್‌ ಪಂತ್‌ ಫಿಟ್‌ ಆಗಿದ್ದು, ಕೀಪಿಂಗ್‌ ನಡೆಸಲಿದ್ದಾರೆ ಎಂದು ಕೋಚ್‌ ಗೌತಮ್‌ ಗಂಭೀರ್‌ ಹೇಳಿದ್ದಾರೆ.

Advertisement

ಬೌಲಿಂಗ್‌ ಕಾಂಬಿನೇಶನ್‌
ಬೆಂಗಳೂರಿನಲ್ಲಿ ಭಾರತದ ಬೌಲಿಂಗ್‌ ಕಾಂಬಿನೇಶನ್‌ ಕೂಡ ಅಷ್ಟೊಂದು ಪರಿಣಾಮ ಕಾರಿ ಎನಿಸಲಿಲ್ಲ. ನ್ಯೂಜಿಲ್ಯಾಂಡ್‌ನ‌ ತ್ರಿವಳಿ ವೇಗಿಗಳಿಗೆ ಹೋಲಿಸಿದರೆ ಭಾರತದ ಇಬ್ಬರು ವೇಗಿಗಳ ದಾಳಿ ತೀರಾ ಸಪ್ಪೆ ಆಗಿತ್ತು. ಆಕಾಶ್‌ ದೀಪ್‌ ಅವರನ್ನು ಕೈಬಿಟ್ಟದ್ದು ತಪ್ಪು ಎಂಬುದು ಅರಿವಾಗಲು ಹೆಚ್ಚು ವೇಳೆ ಹಿಡಿಯಲಿಲ್ಲ. ತ್ರಿವಳಿ ಸ್ಪಿನ್‌ ದಾಳಿ ಕೂಡ ತಂಡದ ಕೈ ಹಿಡಿಯಲಿಲ್ಲ.

ಇದೀಗ ಕಿವೀಸ್‌ ಎಡಗೈ ಬ್ಯಾಟರ್‌ಗಳನ್ನು ಕಾಡಲೇನೋ ಎಂಬಂತೆ ವಾಷಿಂಗ್ಟನ್‌ ಸುಂದರ್‌ ಅವರನ್ನು ಹೆಚ್ಚುವರಿಯಾಗಿ ಸೇರಿಸಿ ಕೊಳ್ಳಲಾಗಿದೆ. ಅಕ್ಷರ್‌ ಪಟೇಲ್‌ ರೇಸ್‌ನಲ್ಲಿದ್ದಾರೆ. ಯಾರನ್ನು ಆರಿಸಿಕೊಳ್ಳುವುದು, ಯಾರನ್ನು ಬಿಡುವುದು ಎನ್ನುವುದೇ ಜಟಿಲ ಸಮಸ್ಯೆ. ಪುಣೆ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇರುವುದರಿಂದ ತ್ರಿವಳಿ ಸ್ಪಿನ್‌ ದಾಳಿ ಸೂಕ್ತವೆನಿಸೀತು. ಆದರೆ ಸ್ಪಿನ್‌ ಕಾಂಬಿನೇಶನ್‌ನಲ್ಲಿ ಬದಲಾವಣೆ ಗೋಚರಿಸಬಹುದು.

ಅತ್ಯುತ್ಸಾಹದಲ್ಲಿ ನ್ಯೂಜಿಲ್ಯಾಂಡ್‌
ನ್ಯೂಜಿಲ್ಯಾಂಡ್‌ 36 ವರ್ಷಗಳ ಬಳಿಕ ಭಾರತ ದಲ್ಲಿ ಟೆಸ್ಟ್‌ ಪಂದ್ಯವೊಂದನ್ನು ಗೆದ್ದ ಅತ್ಯುತ್ಸಾಹ ದಲ್ಲಿದೆ. ಅವರಿಗೆ ಕೇನ್‌ ವಿಲಿಯಮ್ಸನ್‌ ಗೈರು ಖಂಡಿತ ಕಾಡದು. ತಂಡ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಉತ್ತಮ ಸಮ ತೋಲನ ಹೊಂದಿದೆ. ಆದರೆ ಭಾರತ ತಿರುಗಿ ಬೀಳುವ ಎಲ್ಲ ಸಾಧ್ಯತೆ ಇರುವುದರಿಂದ ಗೆಲುವಿನ ಲಯವನ್ನು ಕಾಯ್ದುಕೊಳ್ಳುವುದು ಸವಾಲಾಗಿ ಕಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next