ಪುಣೆ: ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ 14 ನೇ ವಾರ್ಷಿಕೋತ್ಸವ ಸಂಭ್ರಮವು ನ. 6ರಂದು ಪುಣೆಯ ತಿಲಕ್ ಸ್ಮಾರಕ ರಂಗ ಮಂದಿರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಶ್ರೀ ಕ್ಷೇತ್ರ ಒಡಿಯೂರಿನ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅಶಿರ್ವಚನ ನಿಡಿದರು. ಶ್ರೀಗಳನ್ನು ಪ್ರಾರಂಭದಲ್ಲಿ ಚೆಂಡೆ ವಾದ್ಯ ಘೋಷದೊಂದಿಗೆ ಸಮಾರಂಭದ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಅವರು ತುಳಸಿ ಹಾರವನ್ನು ಹಾಕಿ ಶ್ರೀಗಳನ್ನು ಸ್ವಾಗತಿಸಿದರು.
ಸಾಧ್ವಿ ಶ್ರೀ ಮಾತಾನಂದಮಯೀ ಅವರನ್ನು ಮಾತೆಯನ್ನು ಕೇಂದ್ರದ ಅಧ್ಯಕ್ಷೆ ಪ್ರೇಮಾ ಎಸ್. ಶೆಟ್ಟಿ ಅವರು ಹೂ ಹಾರ ಹಾಕಿ ಸ್ವಾಗತಿಸಿದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪೂಜ್ಯ ಶ್ರೀಗಳ ಪಾದ ಪೂಜೆಯನ್ನು ಪುಣೆ ಭಕ್ತರ ಪರವಾಗಿ ಪುಣೆಯ ಉದ್ಯಮಿ ಪುಣೆ ಬಳಗದ ಮಾಜಿ ಅಧ್ಯಕ್ಷ, ಪುಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ಮತ್ತು ಸುಧಾ ಎನ್. ಶೆಟ್ಟಿ ದಂಪತಿ ನೆರವೇರಿಸಿ ಗುರುವಂದನೆ ಸಲ್ಲಿಸಿದರು.
ಬಳಗದ ಸದಸ್ಯೆಯರು ಶ್ರೀಗಳಿಗೆ ಆರತಿ ಬೆಳಗಿಸಿ, ದೇವರ ಸ್ತುತಿ ಹಾಡಿ ಪೂಜೆಗೈದರು. ಮಂಗಳೂರು ಸನಾತನ ನಾಟ್ಯಾಲಯದವರು ಪೂಜ್ಯ ಸ್ವಾಮೀಜಿಯವರಿಗೆ ಪುಷ್ಪಾಂಜಲಿಯೊಂದಿಗೆ ಭಗವದ್ಗೀತೆಯ ಸಾರವನ್ನು ಸಾರುವ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಪುಣೆ ಗುರುದೇವ ಸೇವಾ ಬಳಗದ ವತಿಯಿಂದ ಸದಸ್ಯರು ಭಗವದ್ಭಕ್ತರೆಲ್ಲರೂ ಗುರು ವಂದನೆ ಸಲ್ಲಿಸಿದರು. ಶ್ರೀಗಳು ಭಕ್ತಾದಿಗಳನ್ನು ಪ್ರಸಾದ, ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
ಅಪಾರ ಸಂಖ್ಯೆಯ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಪ್ರಸಾದ ಸ್ವಿಕರಿಸಿದರು. ಮುಂಬಯಿ, ಆಹ್ಮದ್‌ನಗರ, ನಾಸಿಕ್ ಬಳಗದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪುಣೆಯ ವಿವಿದ ಸಂಘ ಸಂಸ್ಥೆ ಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಶ್ರೀಗಳಿಗೆ ಹಾರಾರ್ಪಣೆಗೈದು ಪ್ರಸಾದ ಸ್ವೀಕರಿಸಿದರು.
ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿ, ಮುಂಬಯಿ ಉದ್ಯಮಿ, ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ, ಪುಣೆಯ ಉದ್ಯಮಿ, ಲೆಕ್ಕ ಪರಿಶೋಧಕರಾದ ಎ. ಸದಾನಂದ ಶೆಟ್ಟಿ, ಮುಂಬಯಿ ಬಳಗದ ಉಪಾದ್ಯಕ್ಷ ಚಂದ್ರಹಾಸ್ ರೈ ಬೊಲಾ°ಡುಗುತ್ತು, ಪುಣೆ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ, ಕೇಂದ್ರದ ಅಧ್ಯಕ್ಷೆ ಪ್ರೇಮಾ ಎಸ್. ಶೆಟ್ಟಿ ಅವರು ಉಪಸ್ಥಿತರಿದ್ದರು. ಪುಣೆ ಬಳಗದ ಗೌರವ ಕಾರ್ಯದರ್ಶಿ ಎನ್. ರೋಹಿತ್ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ಆಳ್ವ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಕಾರ್ಯದರ್ಶಿ ವೀಣಾ ಡಿ. ಶೆಟ್ಟಿ ವಂದಿಸಿದರು.
ಚಿತ್ರ-ವರದಿ : ಹರೀಶ್ ಮೂಡಬಿದಿರೆ, ಪುಣೆ