Advertisement

ಪುಣೆ ಮಾದರಿ ಕೈಗಾರಿಕಾ ಅಭಿವೃದ್ಧಿ ಕಾರ್ಯಪಡೆ

09:59 AM Sep 29, 2019 | Suhan S |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಫುಡ್‌ ಪಾರ್ಕ್‌ ಮಾಡಲು ಸರಕಾರ ಸಿದ್ಧವಿದ್ದು, ಇದಕ್ಕೆ ಅಗತ್ಯ ಜಮೀನು ನೀಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ನಗರದ ಡೆನಿಸನ್ಸ್‌ ಹೋಟೆಲ್‌ನಲ್ಲಿ ದಿ ಇಂಡಸ್‌ ಎಂಟರ್‌ಪ್ರಿನರ್ (ಟೈ) ಹುಬ್ಬಳ್ಳಿ ಶನಿವಾರ ಆಯೋಜಿಸಿದ್ದ “ಹುಬ್ಬಳ್ಳಿ-ಧಾರವಾಡ ಪ್ರಗತಿಗೆ ರೂಪುರೇಷೆ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ಸೂಕ್ತ ಜಾಗದಲ್ಲಿ ಫುಡ್‌ಪಾರ್ಕ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿಯಿರುವ ಕಂಪನಿಗಳು ಮುಂದೆ ಬಂದರೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. 300 ಎಕರೆವರೆಗೂ ಜಮೀನು ನೀಡಲಾಗುವುದು ಎಂದರು. ಪತಂಜಲಿ ಸಂಸ್ಥೆ ಫುಡ್‌ಪಾರ್ಕ್‌ ಉದ್ಯಮಕ್ಕೆ ಆಸಕ್ತಿ ತೋರಿದೆ. ದಕ್ಷಿಣ ಭಾರತದಲ್ಲಿ ಹೂಡಿಕೆ ಮಾಡಲು ಸಂಸ್ಥೆ ತೀರ್ಮಾನಿಸಿದ್ದು, ಉತ್ತರ ಕರ್ನಾಟಕದಲ್ಲಿ ಅವರು ಹೂಡಿಕೆ ಮಾಡಿದರೆ ಈ ಭಾಗದಲ್ಲಿ ನೂರಾರು ಜನರಿಗೆ ಉದ್ಯೋಗ ಸಿಗುತ್ತದೆ. ಆಯುರ್ವೇದ ಗಿಡಮೂಲಿಕೆ ಬೆಳೆಯುವ ರೈತರಿಗೆ ಒಳಿತಾಗಲಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುವ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಶೀಘ್ರದಲ್ಲೇ ಈ ನಿಟ್ಟಿನಲ್ಲಿ ನಿರ್ಧಾರ ಮಾಡಲಾಗುವುದು. ಉತ್ತರ ಕರ್ನಾಟಕ ಸೇರಿದಂತೆ ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಉದ್ಯಮ ಕ್ಷೇತ್ರ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಮುಂಬೈ ಹಾಗೂ ದೆಹಲಿಯಲ್ಲಿ ಸ್ಲಾಟ್‌ ಸಿಗದ ಕಾರಣ ಹುಬ್ಬಳ್ಳಿಯಿಂದ ನೇರ ವಿಮಾನ ಸೇವೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಆದರೆ ಶೀಘ್ರದಲ್ಲಿಯೇ ದೆಹಲಿಗೆ ನೇರ ವಿಮಾನ ಕಲ್ಪಿಸಲಾಗುವುದು. ಅಲ್ಲದೇ ಮುಂಬೈಗೆ ಮತ್ತೂಂದು ವಿಮಾನ ಸೇವೆ ಆರಂಭಿಸಲಾಗುವುದು ಎಂದು ನುಡಿದರು.

Advertisement

3 ಸಾವಿರ ಬದಲು ನೂರಷ್ಟೆ: 3000ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದ ಇನ್ಫೋಸಿಸ್‌ನಲ್ಲಿ ಸದ್ಯ ಕೇವಲ 100 ಜನರಿಗೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ನಂದನ ನಿಲೇಕಣಿ ಅವರೊಂದಿಗೆ ಮಾತನಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೈಗಾರಿಕಾ ವಸಾಹತುಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಮೀಸಲಾತಿ ನೀಡುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

2 ವರ್ಷಗಳ ನಿರಂತರ ಪ್ರಯತ್ನದ ನಂತರ ಕಾಂಪ್ರಹೆನ್ಸಿವ್‌ ಡೆವಲಪ್‌ಮೆಂಟ್‌ ಪ್ಲಾನ್‌ಗೆ (ಸಿಡಿಪಿ) ಅನುಮೋದನೆ ದೊರೆತಿದೆ. ಇದು ಅವಳಿ ನಗರದ ಅಭಿವೃದ್ಧಿಗೆ ಪೂರಕವಾಗುವುದು. 25 ವರ್ಷಗಳ ನಂತರ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದ್ದು, ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು. ಹೆಲ್ತ್‌ ಪಾರ್ಕ್‌ ನಿರ್ಮಾಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಲತೇಶ ನಿರಂಜನ, ರವೀಂದ್ರ ಸಂಕೇಶ್ವರ, ವಿಜಯ ಸೆಹಗಲ್‌, ವಿವೇಕ ನಾಯಕ, ಗುರು ಸಾಲಿಮಠ, ವಿವೇಕ ಪವಾರ ಅವರನ್ನು ಸನ್ಮಾನಿಸಲಾಯಿತು. ಶಾಸಕ ಅರವಿಂದ ಬೆಲ್ಲದ, ಶಶಿಧರ ಶೆಟ್ಟರ, ಸಂದೀಪ ಬಿಡಸಾರಿಯಾ, ವಿವೇಕ ಪವಾರ ಮೊದಲಾದವರಿದ್ದರು.

ಪುಣೆಮಾದರಿಯಂತೆ ಕೈಗಾರಿಕಾ ಅಭಿವೃದ್ಧಿಗೆ ಟಾಸ್ಕ್ಫೋರ್ಸ್‌ ಮಾಡುವ ಕುರಿತು ಚಿಂತನೆ ನಡೆಸಲಾಗುವುದು. ಮಹಾರಾಷ್ಟ್ರದಲ್ಲಿ ಪುಣೆ ದ್ವಿತೀಯ ದೊಡ್ಡ ನಗರವಾಗಿದ್ದು, ಅಲ್ಲಿ ಉದ್ಯಮ ಕ್ಷೇತ್ರ ಅಗಾಧವಾಗಿ ಬೆಳೆದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಕೂಡ ಉದ್ಯಮ ಕ್ಷೇತ್ರ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುವುದು. ದೊಡ್ಡ ಉದ್ಯಮಗಳು ಬಂದರೆ ಮಾತ್ರ ಸಣ್ಣ-ಪುಟ್ಟ ಉದ್ಯಮಗಳು ಉಳಿಯುತ್ತವೆ.-ಜಗದೀಶ ಶೆಟ್ಟರ, ಬೃಹತ್‌ಮಧ್ಯಮ ಕೈಗಾರಿಕಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next