ಪುಣೆ: ಕನ್ನಡ ಸಂಘ ಪುಣೆ ವತಿಯಿಂದ ಸದಸ್ಯರಿಗಾಗಿ ಫೆ. 11ರಂದು ಕನ್ನಡ ಸಂಘದ ಕೇತ್ಕರ್ ರಸ್ತೆಯ ಕನ್ನಡ ಮಾಧ್ಯಮ ಶಾಲಾ ಸಭಾಗೃಹದಲ್ಲಿ ಪುರಂದರದಾಸರ ಹಾಡುಗಳ ಸ್ಪರ್ಧೆ ಆಯೋಜಿಸಲಾಗಿತ್ತು.
18 ವರ್ಷ ಮೇಲ್ಪಟ್ಟವರ ಸೀನಿಯರ್ ಮತ್ತು 12ರಿಂದ 18 ವರ್ಷದವರೆಗಿನ ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸೀನಿಯರ್ ವಿಭಾಗದಲ್ಲಿ ಒಟ್ಟು 13 ಸ್ಪರ್ಧಿಗಳು ಹಾಗೂ ಜೂನಿಯರ್ ವಿಭಾಗದಲ್ಲಿ 17 ಸ್ಪರ್ಧಿಗಳು ಭಾಗವಹಿಸಿದ್ದರು. ಜೂನಿಯರ್ ವಿಭಾಗದಲ್ಲಿ ಜಾಹ್ನವಿ ಮನ ಪ್ರಥಮ ಸ್ಥಾನವನ್ನು ಪಡೆದರೆ, ಸನತ್ ಭಟ್ ದ್ವಿತೀಯ, ವೈದೇಹಿ ಅನಿಲ್ ಅವಧಾನಿ ತೃತೀಯ ಹಾಗೂ ಸಾಕ್ಷಿ ಕುಲಕರ್ಣಿ ಸಮಾಧಾನಕರ ಬಹುಮಾನ ಪಡೆದರು.
ಸೀನಿಯರ್ ವಿಭಾಗದಲ್ಲಿ ವೈಷ್ಣವಿ ಎ. ಅವಧಾನಿ ಪ್ರಥಮ ಸ್ಥಾನ ಪಡೆದರೆ, ಶ್ರುತಿ ಭಟ್ ದ್ವಿತೀಯ, ಶಂಕರ್ ಕೆ. ಪೂಜಾರಿ ತೃತೀಯ ಹಾಗೂ ಸಚಿನ್ ಶೆಟ್ಟಿ ಸಮಾಧಾನಕರ ಬಹುಮಾನಗಳನ್ನು ಗಳಿಸಿದ್ದಾರೆ. ಪ್ರಥಮ ಸ್ಥಾನ ಗಳಿಸಿದವರಿಗೆ ವಿಶೇಷ ಬಹುಮಾನ ರೋಲಿಂಗ್ ಶೀಲ್ಡ…ನೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಸ್ಪರ್ಧೆಗೆ ಪುರಂದರದಾಸರ ಕೀರ್ತನೆಗಳನ್ನು ನೀಡಲಾಗಿತ್ತು.
ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ಕೋಶಾಧಿಕಾರಿ ಬಾಬು ರಾವ್, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ಜನಸಂಪರ್ಕಾಧಿಕಾರಿ ರಾಮದಾಸ ಆಚಾರ್ಯ ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಕರ್ನಾಟಕ ಸಂಗೀತ ಪ್ರವೀಣೆ ಸುಚಿತ್ರಾ ಎಸ್. ಹಾಗೂ ಹಿಂದುಸ್ಥಾನಿ ಸಂಗೀತದ ಅಪರ್ಣಾ ಲೇಲೆ ಸಹಕರಿಸಿದ್ದು, ಅವರನ್ನು ಪುಷ್ಪಗುತ್ಛವನ್ನಿತ್ತು ಸತ್ಕರಿಸಲಾಯಿತು.
ಕನ್ನಡ ಮಾಧ್ಯಮ ಶಾಲಾ ಪ್ರಾಚಾರ್ಯರಾದ ಚಂದ್ರಕಾಂತ ಹರ್ಕುಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.