Advertisement

ಪುಣೆ-ಬೆಂಗಳೂರು ಷಟ್ಪಥ ರಸ್ತೆ ಕಾಮಗಾರಿಗೆ ತಾತ್ವಿಕ ಒಪ್ಪಿಗೆ: ಗಡ್ಕರಿ

10:37 AM Dec 11, 2019 | sudhir |

ಬೆಂಗಳೂರು: ಪುಣೆ-ಬೆಂಗಳೂರು ಷಟ್ಪಥ ರಸ್ತೆ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಕೈಗೊಳ್ಳಲಿದ್ದೇವೆ ಮತ್ತು ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

Advertisement

ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಹೆದ್ದಾರಿ ಕಾಮಗಾರಿಗಳ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅನಂತರ ಮಾತನಾಡಿದ ಅವರು, ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್‌ ಮಾರ್ಗವು ಕರ್ನಾಟಕ, ಮಹಾರಾಷ್ಟ್ರಗಳಿಗೆ ಆವಶ್ಯಕವಾಗಿದ್ದು ಷಟ³ಥ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಸಂಬಂಧ ಅಗತ್ಯ ಪ್ರಕ್ರಿಯೆಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದರು.

ಹುಬ್ಬಳ್ಳಿ- ಸೊಲ್ಲಾಪುರ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮನವರಿಕೆ ಮಾಡಿಕೊಟ್ಟಿದ್ದರಿಂದ, ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಾತ್ವಿಕ ಒಪ್ಪಿಗೆ ನೀಡಿದರು. ಈ ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕ್ರಮಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಸದ್ಯ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ ಸಚಿವ ಗಡ್ಕರಿ, ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಭೂ ಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶ ನೀಡಿದರು.

ರಾಜ್ಯದಲ್ಲಿ ಹೊಸ ಮಾರ್ಗಗಳಿಗೆ ಸಂಬಂಧಿಸಿದಂತೆ ಭೂಮಿ ಲಭ್ಯತೆ ಮತ್ತು ಸ್ವಾಧೀನ ಪ್ರಕ್ರಿಯೆಯ ಬಗ್ಗೆಯೂ ಚರ್ಚೆ ನಡೆದಿದೆ. ಬೆಂಗಳೂರಿನ ಅಭಿವೃದ್ಧಿ ಪೂರಕವಾಗುವಂತೆ ರಸ್ತೆ ಯೋಜನೆಗಳು ಮತ್ತು ರಾಜ್ಯಕ್ಕೆ ಅಗತ್ಯವಿರುವ ಹೊಸ ಮಾರ್ಗ, ಹೆದ್ದಾರಿ ಕಾಮಗಾರಿಗಳ ಶೀಘ್ರ ಮುಕ್ತಾಯ, ಮೇಲ್ಸೇತುವೆ ಇತ್ಯಾದಿ ಹಲವು ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರ ಸಚಿವರ ಗಮನ ಸೆಳೆದರು.

Advertisement

ಗರಂ ಆದ ಸಚಿವರು
ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಇದ್ದ ಸಂದರ್ಭದಲ್ಲಿ ರಸ್ತೆ ಕಾಮಗಾರಿ ಪ್ರಕ್ರಿಯೆ ವೇಗವಾಗಿ ಸಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಗರಂ ಆದ ಸಚಿವರು, ಈಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸರಕಾರ ಇದೆ. ಯಾವುದೇ ಸಬೂಬು ನೀಡದೆ 1,500 ಕಿ.ಮೀ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ, ವಾಹನ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಡ್ಕರಿ ಅಭಿನಂದನೆ
ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅಭಿನಂದನೆ ಸಲ್ಲಿಸಿದರು. ಸುಭದ್ರ ಸರಕಾರಕ್ಕೆ ಈ ಗೆಲುವು ಸಹಕಾರಿಯಾಗಿದೆ. ಬಿ.ಎಸ್‌.ಯಡಿಯೂರಪ್ಪ ಅವರು ಅಭಿವೃದ್ಧಿ ಪರ ಮುಖ್ಯಮಂತ್ರಿಯಾಗಿದ್ದು, ಅವರು ಕೇಂದ್ರದಿಂದ ಪೂರ್ಣ ಸಹಕಾರಿ ಸಿಗಲಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಇದಕ್ಕಾಗಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಬಿಜೆಪಿಗೆ ರಾಜ್ಯದ ಜನ ಆಶೀರ್ವಾದ ಮಾಡಿದ್ದಾರೆ. ಬಿಜೆಪಿ ಸರಕಾರ ಸ್ಥಿರ, ಸುಭದ್ರವಾಗಿದ್ದು ಬಿ.ಎಸ್‌.ಯಡಿಯೂರಪ್ಪ ಅವರು ಸಮಗ್ರ ಅಭಿವೃದ್ಧಿಗೆ ಒತ್ತು ಕೊಡಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next