ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ನಡೆಯಲಿದೆ. ಇದಕ್ಕಾಗಿ ತೆರವುಗೊಳಿಸಬೇಕಾದ ಮರಗಳ ಸಮೀಕ್ಷೆ ನಡೆದಿದ್ದರೂ ರಸ್ತೆಯನ್ನು ಹೆಚ್ಚು ನೇರಗೊಳಿಸುವ ಉದ್ದೇಶದಿಂದ ತಿರುವು ಗಳಲ್ಲಿ ಹೊಸ ಸಮೀಕ್ಷೆಗೆ ಆದೇಶಿಸಲಾಗಿದೆ. ಈ ಹಿಂದೆ 35 ಕಿ.ಮೀ. ರಸ್ತೆ ಗುರುತಿಸಲಾ ಗಿದ್ದು, ಇದು ನೇರಗೊಳ್ಳುವ ಕಾರಣ 33.1 ಕಿ.ಮೀ.ಗೆ ಇಳಿಕೆಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ವೈ.ಕೆ. ದಿನೇಶ್ ಕುಮಾರ್ ಹೇಳಿದರು.
ಅವರು ಗುರುವಾರ ಬೆಳ್ತಂಗಡಿಯ ಅರಣ್ಯ ಇಲಾಖೆ ಕಚೇರಿಯಲ್ಲಿ ತೆರವುಗೊಳ್ಳ ಬೇಕಾದ ಮರಗಳ ಬಗ್ಗೆ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವ್ಯಾಪ್ತಿಯಲ್ಲಿ ಕಾಮಗಾರಿಗೆ 718 ಕೋ.ರೂ. ಮಂಜೂರುಗೊಂಡಿದೆ. ಗುರುವಾಯನಕೆರೆಯಿಂದ ಉಜಿರೆಯ ಚಾರ್ಮಾಡಿ ರಸ್ತೆ ಪೆಟ್ರೋಲ್ ಬಂಕ್ ತನಕ 9.5 ಕಿ.ಮೀ. ರಸ್ತೆ ಡಿವೈಡರ್ ಸೇರಿ ದ್ವಿಪಥವಾಗಿ ನಿರ್ಮಾಣಗೊಳ್ಳಲಿದ್ದು, ಇದಕ್ಕೆ ಸರ್ವೀಸ್ ರಸ್ತೆ ಇರುತ್ತದೆ. ನಗರ ಪ್ರದೇಶದಲ್ಲಿ ರಸ್ತೆಯ ಅಗಲ 30 ಮೀ., ಉಳಿದಂತೆ ಗ್ರಾಮೀಣ ಪ್ರದೇಶಗಳಲ್ಲಿ 18ರಿಂದ 20 ಮೀ. ಇರುತ್ತದೆ. ಜುಲೈ 11ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 88 ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ಧಿ ವೇಳೆ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲು ಮೀಸಲಿರಿಸಲಾಗಿದೆ. ಈ ರಸ್ತೆಯ ಅಭಿವೃದ್ಧಿಗೆ ಇಲಾಖೆಗೆ 50 ಎಕರೆಯಷ್ಟು ರಸ್ತೆ ವ್ಯಾಪ್ತಿಗೆ ಒಳಪಟ್ಟ ಭೂಮಿಯ ಅಗತ್ಯವಿದೆ. ಎಲ್ಲ ವಿಚಾರಗಳ ಸಂಪೂರ್ಣ ಚಿತ್ರಣ ಅಂತಿಮ ಹಂತದ ಸಮೀಕ್ಷೆಗಳು ನಡೆದ ಬಳಿಕವಷ್ಟೇ ತಿಳಿದು ಬರಬೇಕಾಗಿದೆ. ನೂತನ ಸಮೀಕ್ಷೆ ಕೂಡಲೇ ಆರಂಭವಾಗಲಿದೆ ಎಂದು ರಾ.ಹೆ. ಇಲಾಖೆಯ ಎಇಇ ಕೃಷ್ಣಕುಮಾರ್ ತಿಳಿಸಿದರು. ಮಂಗಳೂರು ವಲಯದ ಎಸಿಎಫ್ ಸುಬ್ರಹ್ಮಣ್ಯ ರಾವ್, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಇಲಾಖೆಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.
ಸಹ್ಯಾದ್ರಿ ಸಂಚಯದ ಮನವಿ
ಪರಿಸರ ಪ್ರೇಮ ಹೊಂದಿರುವ ಮಂಗಳೂರಿನ ಸಹ್ಯಾದ್ರಿ ಸಂಚಯದ ವತಿಯಿಂದ ಕಾರ್ಗಿಲ್ ವನದ ರೂವಾರಿ ಮುಂಡಾಜೆಯ ಸಚಿನ್ ಭಿಡೆ ಅವರು ಅರಣ್ಯ ಇಲಾಖೆಗೆ ವಿಶೇಷ ಮನವಿ ನೀಡಿದ್ದು, ರಸ್ತೆ ಅಭಿವೃದ್ಧಿ ವೇಳೆ ಸ್ಥಳಾಂತರ ಮಾಡಲು ಸಾಧ್ಯವಿರುವ ಮರಗಳನ್ನು ಬೇರೊಂದು ಕಡೆಯಲ್ಲಿ ನೆಡಬೇಕು. ರಸ್ತೆ ಕಾಮಗಾರಿಯ ಜತೆ ಮೋರಿ, ಚರಂಡಿ, ಡ್ರೈನೇಜ್ ಮತ್ತು ಮೆಸ್ಕಾಂನ ಕಂಬ, ತಂತಿ ಜೋಡಣೆ ಕುರಿತು ಆಯಾಯ ಇಲಾಖೆಗಳಿಂದ ಮಾಹಿತಿ ಪಡೆದು ಅದಕ್ಕೆ ಪೂರಕವಾಗಿ ಕಾಮಗಾರಿ ನಡೆಸಬೇಕು. ಹೆದ್ದಾರಿ ಇಲಾಖೆಯು ನಿಗದಿತ ಸ್ಥಳಕ್ಕಿಂತ ಹೆಚ್ಚಿನ ಸ್ಥಳವನ್ನು ಗಿಡಮರಗಳನ್ನು ಬೆಳೆಯಲು ಅರಣ್ಯ ಇಲಾಖೆಯ ಸುಪರ್ದಿಗೆ ನೀಡಬೇಕು ಎಂದು ತಿಳಿಸಿದರು.