Advertisement

‘4 ವರ್ಷಗಳಲ್ಲಿ 12 ಕೋ.ರೂ.ಅಭಿವೃದ್ಧಿ ಕಾರ್ಯ’

02:05 AM Jul 15, 2017 | Team Udayavani |

ವಿಟ್ಲ: ಊರಿನ ಅಭಿವೃದ್ಧಿ ದೃಷ್ಟಿಯಲ್ಲಿ ನೀಡಿದ ಪ್ರತಿಯೊಬ್ಬರ ಅಹವಾಲುಗಳನ್ನು ಸ್ವೀಕರಿಸಿ ಪಕ್ಷಾತೀತವಾಗಿ ಅನುದಾನ ಹಂಚಿಕೆ ಮಾಡಲಾಗಿದೆ. ಪುಣಚ ಗ್ರಾಮಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 12 ಕೋ.ರೂ.ಗಳಿಗಿಂತಲೂ ಅಧಿಕ ಅನುದಾನವನ್ನು ಮೂಲ ಸೌಕರ್ಯಗಳೊಂದಿಗೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಒದಗಿಸಲಾಗಿದೆ ಎಂದು ಪುತ್ತೂರು ಶಾಸಕಿ ಟಿ. ಶಕುಂತಳಾ ಶೆಟ್ಟಿ  ಹೇಳಿದ್ದಾರೆ. ಅವರು ಶುಕ್ರವಾರ ಪುಣಚ ಗ್ರಾ.ಪಂ. ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದರು.

Advertisement

ಈ ಬಾರಿ ಕುಳ ಮತ್ತು ಪೆರುವಾಯಿ ಗ್ರಾಮಗಳಿಗೆ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ಬದನಾಜೆ-ಕುಂಡಡ್ಕ -ಪರಿಯಾಲ್ತಡ್ಕ ರಸ್ತೆಗೆ ವನ್‌ಟೈಮ್‌ ಫಂಡ್‌ ಅನುದಾನ 2.20 ಕೋ.ರೂ. ಮಂಜೂರಾಗಿದ್ದು ಎರಡೂ ಭಾಗಗಳಿಂದ ಆಗಸ್ಟ್‌ ತಿಂಗಳ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ಶಾಸಕತ್ವದ ಅವಧಿಯಲ್ಲಿ ನಾಗರಿಕರ ಬಹುತೇಕ ಬೇಡಿಕೆ ಈಡೇರಿಸಿದ್ದೇನೆ ಎಂಬ ಸಂತೃಪ್ತಿಯಿದೆ ಎಂದರು.

ತೆರಿಗೆ ವಂಚಕರಿಗೆ ದಂಡ ವಿಧಿಸಿ
ಶ್ರೀಮಂತರು ತೆರಿಗೆ ವಂಚನೆ ಮಾಡುತ್ತಿದ್ದಾರೆ. ಬಡವರು ತೆರಿಗೆ ಪಾವತಿಸುತ್ತಿದ್ದಾರೆ. ತೆರಿಗೆ ಪಾವತಿಸಲು ತಡವಾದರೆ ಅವರಿಗೆ ದಂಡ ವಿಧಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಪುಣಚ ಗ್ರಾಮಸ್ಥರು ಆಗ್ರಹಿಸಿದರು.

ಕಸದ ರಾಶಿ
ಪುಣಚ ಗ್ರಾಮದ ಪರಿಯಾಲ್ತಡ್ಕ ಪೇಟೆಯಲ್ಲಿ ಕಸದ ರಾಶಿ ಬಿದ್ದಿದೆ. ಪೇಟೆಯ ಅಂಗಡಿಗಳ ಮಾಲಕರು ಕಸಗಳನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿದ್ದಾರೆ. ಈ ಬಗ್ಗೆ ಪಂಚಾಯತ್‌ ಗಮನ ಹರಿಸಿ, ಅಂಗಡಿ ಬದಿಗಳಲ್ಲಿ ಬಕೆಟ್‌ ವ್ಯವಸ್ಥೆ ಮಾಡಬೇಕು. ಅವುಗಳನ್ನು ಮೀರಿದವರ ಮೇಲೆ ಕ್ರಮ ಜರಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಪುಣಚ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರನ್ನು ನಿಯೋಜಿಸಬೇಕು. ರಕ್ತ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು. ಆಸ್ಪತ್ರೆಯ ಅಭಿವೃದ್ಧಿಗಾಗಿ ಸಮಿತಿ ರಚಿಸಬೇಕು ಎಂದು ನಾಗರಿಕರು ಆಗ್ರಹಿಸಿದರು.

ದೀರ್ಘ‌ ಮಾತಿಗೆ ಆಕ್ಷೇಪ
ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರು ಪುಣಚ ಗ್ರಾಮದ ಅಭಿವೃದ್ಧಿಗೆ ನೀಡಿದ ಅನುದಾನದ ಬಗ್ಗೆ ವಿವರಣೆ ನೀಡುತ್ತಿದ್ದಾಗ ಸಭೆಯಿಂದ ಅಸಮಾಧಾನದ ಮಾತು ಕೇಳಿ ಬಂತು. ಆಗ ಶಾಸಕರು ‘ಕ್ಷೇತ್ರದ ಶಾಸಕಿಯಾಗಿ ಗ್ರಾಮಸಭೆಯಲ್ಲಿ ಭಾಗವಹಿಸಿ ಗ್ರಾಮದಿಂದ ಬಂದ ಬೇಡಿಕೆಗಳನ್ನು ಪ್ರಸ್ತಾಪಿಸುತ್ತಾ, ಅನುದಾನ ಹಂಚಿಕೆಯ ಬಗ್ಗೆ ಮಾತನಾಡುತ್ತಿದ್ದೇನೆ ಹೊರತು ಇತರ ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ’ ಎಂದು ಸಮರ್ಥಿಸಿಕೊಂಡರು.

Advertisement

ಬೆಳೆವಿಮೆ ಮಾಹಿತಿ ನೀಡಿ
ಬೆಳೆವಿಮೆ ಬಗ್ಗೆ ತೋಟಗಾರಿಕಾ ಇಲಾಖೆಯವರು ಯಾವುದೇ ಮಾಹಿತಿ ನೀಡುತ್ತಿಲ್ಲ. ಅವರು ಗ್ರಾಮ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಹಲವು ತೋಟಗಳು ಕೊಳೆರೋಗಕ್ಕೆ ತುತ್ತಾಗುತ್ತಿವೆ ಎಂದು ನಾಗರಿಕರು ಆರೋಪಿಸಿದರು.

ಪುಣಚ ಗ್ರಾ.ಪಂ. ಅಧ್ಯಕ್ಷೆ ಪ್ರತಿಭಾ ಶ್ರೀಧರ್‌ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಇಲಾಖೆಯ ಸುಧಾ ಜೋಷಿ ಅವರು ನೋಡಲ್‌ ಅಧಿಕಾರಿಯಾಗಿ ಭಾಗವಹಿಸಿದ್ದರು. ಜಿ.ಪಂ.ಸದಸ್ಯೆ ಜಯಶ್ರೀ ಕೋಡಂದೂರು, ತಾ.ಪಂ.ಸದಸ್ಯೆ ಕವಿತಾ ಸುಬ್ಬನಾಯ್ಕ, ಅಭಿವೃದ್ಧಿ ಅಧಿಕಾರಿ ಭಾರತಿ, ಗ್ರಾಮ ಪಂಚಾಯತ್‌ ಸದಸ್ಯರು ಉಪಸ್ಥಿತರಿದ್ದರು.

ಡೆಂಗ್ಯೂ ಪ್ರಕರಣ ಪತ್ತೆ
ಪುಣಚ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಯೇಧುರಾಜ್‌ ಅವರು ಮಾತನಾಡಿ ಕಳೆದ ಕೆಲವು ತಿಂಗಳುಗಳಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ  ಮನೆಮನೆಗೆ ತೆರಳಿ ಅವುಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಲಾಗಿದೆ. ಸೊಳ್ಳೆ ಉತ್ಪತ್ತಿಯಾಗದಂತೆ ನಾಗರಿಕರು ಎಚ್ಚರ ವಹಿಸಬೇಕು. ಕೇರಳ ರಾಜ್ಯದ ಕಾಸರಗೋಡಿನಿಂದ ನಮ್ಮ ಪರಿಸರಕ್ಕೆ ಎಚ್‌1ಎನ್‌1 ರೋಗ ಹರಡುತ್ತಿದೆ. ಹಂದಿಗಳ ಮೂಲಕ ಮನುಷ್ಯನಿಗೆ ಈ ರೋಗ ಹರಡುತ್ತದೆ. ಇಲಾಖೆ ವತಿಯಿಂದ ಇದನ್ನು ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next