Advertisement

ಭರ್ಜರಿ ಪಪ್ಪಾಯ ಕೈ ತುಂಬ ಆದಾಯ

11:25 AM Oct 02, 2017 | |

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಛಲ ಹೊಂದಿದವರು ಎಂತಹ ಸಂಕಷ್ಟದ ಸನ್ನಿವೇಶದಲ್ಲೂ ಸಾಧಿಸಿ ತೋರಿಸುತ್ತಾರೆ. ಈ ಮಾತಿಗೆ ಸಾಕ್ಷಿ ಇರುವವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಂತರವಳ್ಳಿ ಗ್ರಾಮದ ನಡೀಗದ್ದೆ ನಾರಾಯಣ ಹೆಗಡೆ ಅವರು. ಬೀಳು ಭೂಮಿಯನ್ನು ಹದಗೊಳಿಸಿ ಪಪ್ಪಾಯಿ ಕೃಷಿ ನಡೆಸಿ ಸಮೃದ್ಧ ಫ‌ಸಲು ಪಡೆಯುತ್ತಿದ್ದಾರೆ.

Advertisement

ಕೃಷಿ ಹೇಗೆ?
ಕುಮಟಾ-ಶಿರಸಿ ಮಾರ್ಗದ ಹೆದ್ದಾರಿ ಸಮೀಪ ಅಂತರವಳ್ಳಿ ಗ್ರಾಮವಿದೆ. ಈ ಗ್ರಾಮದ ನೇರಲೆ ಬ್ಯಾಣದಲ್ಲಿ ಸುಮಾರು 20 ಎಕರೆ ಜಮೀನು ಬಹಳ ವರ್ಷಗಳಿಂದ  ಬೀಳು ಬಿದ್ದಿತ್ತು. ಇದನ್ನು ಖರೀದಿಸಲು ಬಂದ ಹಲವರು ಅಲ್ಲಿಂದ  ಬರಡು ಭೂಮಿ, ಮುಳ್ಳಿನ ಪೊದೆಗಳನ್ನು ಕಂಡು ವಾಪಸಾಗುತ್ತಿದ್ದರು. ನಾರಾಯಣ ಹೆಗಡೆ ಇದನ್ನು ಖರೀದಿಸಿ ಸಾಗುವಳಿ ಶುರುಮಾಡಿದರು. ಕಳೆ, ಪೊದೆಗಳನ್ನು ತೆರವುಗೊಳಿಸಿ, ಭೂಮಿ ಸಮತಟ್ಟು ಗೊಳಿಸಿ ಕೃಷಿ ಆರಂಭಿಸಿದರು.

ಈ ಹೊಲದಲ್ಲಿ ನೂರಾರು ನೇರಳೆ ಮರಗಳಿದ್ದವು.   ಅವುಗಳ ರೆಂಬೆ ಕೊಂಬೆಗಳನ್ನು ಸ್ವಲ್ಪ ಮಾತ್ರ ಕಡಿದು, ಮರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದ್ದಾರೆ. ಕಿತ್ತು ಹಾಕಿದ ಕಳೆ ಪೊದೆಗಳನ್ನು ಒಂದೆಡೆ ರಾಶಿ ಹಾಕಿ,  ಕೊಳೆತು ಗೊಬ್ಬರವಾಗುವಂತೆ ಮಾಡಿದ್ದಾರೆ. ಇಡೀ ಕೃಷಿ ಭೂಮಿಗೆ ಭತ್ತದ ಕರಿ, ಸುಣ್ಣ ಹಾಗೂ ಸುಡಮಣ್ಣನ್ನು ಹದವಾಗಿ ಹರಡುವಂತೆ ಮಾಡಿದ್ದಾರೆ. ಈ ಭೂಮಿಯಲ್ಲಿ ಒಂದು ದೊಡ್ಡ ತೆರೆದ ಬಾವಿ ಮತ್ತು ಕೊಳವೆ ಬಾವಿ ತೆಗೆಸಿ ಇಡೀ ಹೊಲದಲ್ಲಿನ ನೀರು ಸಾಕಷ್ಟು ಇಂಗುವಂತೆ ಮಧ್ಯೆ ದೊಡ್ಡ ಕಾಲುವೆ ಮತ್ತು ನಡು ನಡುವೆ ಚಿಕ್ಕ ಕಾಲುವೆ ನಿರ್ಮಿಸಿಕೊಂಡಿದ್ದಾರೆ. 

19 ಎಕರೆ ವಿಸ್ತೀರ್ಣದ ಈ ಹೊಲದಲ್ಲಿ ಕಳೆದ ಜುಲೈನಲ್ಲಿ ಪಪ್ಪಾಯಿ ಸಸಿ ನೆಟ್ಟಿದ್ದರು. ರೆಡ್‌ ಲೇಡಿ ತಳಿಯ ಪೊಪ್ಪಾಳೆ ಇದು. ನೆಟ್ಟ 3 ತಿಂಗಳಿಗೆ ಹೂ ಬಿಟ್ಟು ಕಾಯಿಬಿಡಲಾರಂಭಿಸಿತ್ತು.  ಮಳೆಗಾಲದಲ್ಲಿನ ಅತಿ ಮಳೆ ಮತ್ತು ಪ್ರವಾಹದ ಕಾರಣ ಒಂದು ಭಾಗದ ಸಾವಿರಕ್ಕೂ ಅಧಿಕ ಪೊಪ್ಪಾಳೆ ಗಿಡಗಳು ಕೊಳೆತು  ನಾಶವಾದವು. ಆದರೂ ಧೃತಿಗೆಡದ ನಾರಾಯಣ ಹೆಗಡೆ, ನವೆಂಬರ್‌ ತಿಂಗಳ ಅಂತ್ಯದ ಸುಮಾರಿಗೆ ಮತ್ತೆ ಸಸಿ ನಾಟಿ ಮಾಡಿ ಗಿಡ ಬೆಳೆಸಿದರು.

ಎಲ್ಲಾ ಗಿಡಗಳಿಗೂ ಮೈಕ್ರೋ ಸ್ಪ್ರಿಂಕ್ಲರ್‌ ಮೂಲಕ ನೀರಾವರಿ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಸಾಲಿನಿಂದ ಸಾಲಿಗೆ 6 ಅಡಿ ಮತ್ತು ಗಿಡದಿಂದ ಗಿಡಕ್ಕೆ 5 ಅಡಿ ಬರುವಂತೆ ಪಪ್ಪಾಯಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಗಿಡ ನೆಟ್ಟ 5 ದಿನಕ್ಕೆ 20:20 ಕಾಂಪ್ಲೆಕ್ಸ್‌ ಮತ್ತು ಪೊಟ್ಯಾಷ್‌ ಮಿಶ್ರಣ ಮಾಡಿ ಸರಾಸರಿ ಪ್ರತಿ ಗಿಡಕ್ಕೆ 50 ಗ್ರಾಂ.ನಷ್ಟು ಗೊಬ್ಬರ ನೀಡಿದ್ದಾರೆ. ನಂತರ ಪ್ರತಿ 25 ದಿನಕ್ಕೆ ಒಮ್ಮೆಯಂತೆ ಕಾಂಪ್ಲೆಕ್ಸ್‌ ಗೊಬ್ಬರ, ಭತ್ತದ ಕರಿ ಮತ್ತು ದ್ರವರೂಪದ ಸಗಣಿ ಗೊಬ್ಬರ ನೀಡುತ್ತಾ ಕೃಷಿ ಮುಂದುವರೆಸಿದ್ದಾರೆ.  

Advertisement

ಲಾಭ ಹೇಗೆ ?
ಇವರು ಒಟ್ಟು 7,000 ಪಪ್ಪಾಯಿ ಗಿಡ ನೆಟ್ಟಿದ್ದಾರೆ. ರೆಡ್‌ ತಳಿಯಾದ್ದರಿಂದ ಗಿಡದ ಬುಡದಿಂದ ಫ‌ಸಲು ಬಿಟ್ಟಿದೆ. ಪ್ರತಿ ದಿನ ಕಟಾವು ನಡೆಸುತ್ತಿದ್ದಾರೆ. ವಿಶಾಲವಾದ ಹೊಲವಾದ ಕಾರಣ 4 ದಿನಕ್ಕೊಮ್ಮೆ ಪ್ರತಿ ಗಿಡದ ಫ‌ಸಲು ಕಟಾವಿಗೆ ಸಿಗುತ್ತದೆ. ಶಿರಸಿ, ಕುಮಟಾ, ಕಾರವಾರ, ಹುಬ್ಬಳ್ಳಿ, ಪಣಜಿ, ಗೋವಾ, ಮುಂಬಯಿ, ಅಹಮದಾಬಾದ್‌ ಮುಂತಾದ ಊರುಗಳಿಂದ ಹಣ್ಣಿನ ವ್ಯಾಪಾರಸ್ಥರು ದಲ್ಲಾಳಿಗಳ ಜೊತೆ ಆಗಮಿಸುತ್ತಾರೆ.

ಕಳೆದ ಬೇಸಿಗೆಯ ಮೇ ತಿಂಗಳ ಮೊದಲ ವಾರದಿಂದ ಪ್ರತಿ ನಿತ್ಯ 4 ಟನ್‌ ಪಪ್ಪಾಯಿ ಹಣ್ಣು ಮಾರಾಟಕ್ಕೆ ಸಿಗುತ್ತಿದೆ. ಟನ್‌ ಒಂದಕ್ಕೆ ಸರಾಸರಿ ರೂ.6000 ಬೆಲೆ ಇದೆ.  ಅಂದರೆ ಸರಾಸರಿ ರೂ.24 ಸಾವಿರ ಆದಾಯ ದೊರೆಯುತ್ತಿದೆ. ನೀರಾವರಿ ವ್ಯವಸ್ಥೆ, ಗೊಬ್ಬರ, ಔಷಧ, ಕೂಲಿಯಾಳುಗಳ ಸಂಬಳ ಎಲ್ಲವನ್ನೂ ಲೆಕ್ಕ ಹಾಕಿದರೆ, ನಿತ್ಯ ಸರಾಸರಿ 4,000ರೂ. ವೆಚ್ಚ ಬರುತ್ತಿದೆ.

ಉಳಿದಂತೆ ನಿತ್ಯ 20 ಸಾವಿರ  ಲಾಭ ದೊರೆಯುತ್ತದೆ. ಭೂಮಿ ಖರೀದಿ, ಕೊಳವೆ ಬಾವಿ ಮತ್ತು ತೆರೆದ ಬಾವಿ ನಿರ್ಮಾಣ, ಭೂಮಿ ಹದ ಗೊಳಿಸಿ ಗಿಡ ಖರೀದಿಸಿ ,ಗುಂಡಿ ನಿರ್ಮಿಸಿ ಗಿಡ ನೆಟ್ಟಿದ್ದು ಇತ್ಯಾದಿ ಮೂಲ ಬಂಡವಾಳ ತೊಡಗಿಸಿದ ಖರ್ಚಿಗೆ ಸರಿ ಹೊಂದಿಸಲು ಈ ಲಾಭದ ಹಣ ವಿನಿಯೋಗ ವಾಗುತ್ತದೆ.

ಒಂದು ವರ್ಷಗಳ ಕಾಲ ಇದೇ ರೀತಿ ಆದಾಯ ದೊರೆತರೆ ಮುಂದಿನ ಫ‌ಸಲು ಲಾಭದ ಲೆಕ್ಕಕ್ಕೆ ಜಮೆಯಾಗುತ್ತದೆ ಅನ್ನುತ್ತಾರೆ ನಾರಾಯಣ ಹೆಗಡೆ. ಬೀಳು ಭೂಮಿಯೆಂದು ನಿರ್ಲಕ್ಷಿಸಲ್ಪಟ್ಟ ಈ ಜಮೀನಿನಲ್ಲಿ ಛಲ ಬಿಡದೆ ಪರಿಶ್ರಮದಿಂದ ಇವರು ನಡೆಸುತ್ತಿರುವ ಕೃಷಿ ಸುತ್ತಮುತ್ತಲ ಯುವ ಕೃಷಿಕರಿಗೆ ಮಾದರಿಯಾಗಿದೆ.

ಮಾಹಿತಿಗೆ- 8277394054 

* ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next