Advertisement

ಪಂಪ್‌ವೆಲ್‌, ತೊಕ್ಕೊಟ್ಟು ಮೇಲ್ಸೇತುವೆ ಜನವರಿಯೊಳಗೆ ಮುಗಿಸಿ: ನಳಿನ್‌

10:58 AM Jul 06, 2018 | Team Udayavani |

ಮಂಗಳೂರು:  ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಜನವರಿಯೊಳಗೆ ಪೂರ್ಣಗೊಳಿಸುವ ಬಗ್ಗೆ ರಾ.ಹೆ.ಇಲಾಖೆ ಜು.15ರೊಳಗೆ ಅಫಿದವಿತ್‌ ಮೂಲಕ ಭರವಸೆ ನೀಡಬೇಕು. ಇಲ್ಲವಾದರೆ ಜು.16ರಿಂದ ತಲಪಾಡಿಯಲ್ಲಿ ಟೋಲ್‌ ಸಂಗ್ರಹಕ್ಕೆ ತಡೆ ಹಾಕಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಎಚ್ಚರಿಸಿದ್ದಾರೆ.
ಎನ್‌ಎಚ್‌ಎಐ ಮತ್ತು ನವಯುಗ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳೊಂದಿಗೆ ಗುರುವಾರ ತೊಕ್ಕೊಟ್ಟು, ತಲಪಾಡಿ, ಪಂಪ್‌ವೆಲ್‌, ನಂತೂರು, ಕೊಟ್ಟಾರ ಹಾಗೂ ಸುರತ್ಕಲ್‌ಗ‌ಳಲ್ಲಿ  ಚತುಷ್ಪಥ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 

Advertisement

ತೊಕ್ಕೊಟ್ಟು ಮತ್ತು ಪಂಪ್‌ವೆಲ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಶುರುವಾಗಿ 8 ವರ್ಷ ಕಳೆದಿದೆ. ಸಾಕಷ್ಟು ಕಾಲಾವಕಾಶವನ್ನು ಗುತ್ತಿಗೆ ಸಂಸ್ಥೆಗೆ ನೀಡಿದ್ದರೂ ಕೆಲಸ ಆಗಿಲ್ಲ. ಇನ್ನು ಕಾಮಗಾರಿ ವಿಳಂಬಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಚರಂಡಿ ಹೂಳೆತ್ತಿ
ಹೆದ್ದಾರಿ ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ನಿರ್ಮಿಸಬೇಕು. ಮಾರ್ಗಸೂಚಿ ಫ‌ಲಕ ಅಳವಡಿಸಬೇಕು. ಪಂಪ್‌ವೆಲ್‌ನಲ್ಲಿ ಮೇಲ್ಸೇತುವೆಗೂ ಮುನ್ನ ಸರ್ವೀಸ್‌ ರಸ್ತೆ ನಿರ್ಮಾಣ ಆಗಬೇಕು. ಕೊಟ್ಟಾರಚೌಕಿ, ಸುರತ್ಕಲ್‌ ನಲ್ಲಿ ಚರಂಡಿ ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು. ತಲಪಾಡಿ ಟೋಲ್‌ಗೇಟ್‌ ಬಳಿ ಸರ್ವೀಸ್‌ ರಸ್ತೆ, ಕಾಲುದಾರಿ ಮತ್ತು ಉಚ್ಚಿಲದಲ್ಲಿ ಸರ್ವೀಸ್‌ ರಸ್ತೆಗೆ ಮುಖ್ಯ ಎಂಜಿನಿಯರ್‌ ರವಿ ಕುಮಾರ್‌ಗೆ ಸಂಸದರು ಹೇಳಿದರು. ಎನ್‌ಎಚ್‌ಎಐ ಅಧಿಕಾರಿ ಅಜಿತ್‌, ಮುಖಂಡರಾದ ಸಂತೋಷ್‌ ಬೋಳಿಯಾರ್‌, ಸತೀಶ್‌ ಕುಂಪಲ, ಲಲತಾ ಸುಂದರ್‌ ತೊಕ್ಕೊಟ್ಟು  ಉಪಸ್ಥಿತರಿದ್ದರು.

ಟೋಲ್‌ ವಿನಾಯಿತಿ ನೀಡಿ
ತಲಪಾಡಿ ಟೋಲ್‌ಗೇಟ್‌ ಮೂಲಕ ಸಂಚರಿಸುವ ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಕಡೆಯ ಸ್ಥಳೀಯ ವಾಹನಗಳಿಗೆ  ಟೋಲ್‌ನಿಂದ ವಿನಾಯಿತಿ ನೀಡಬೇಕು. ಎರಡೂ ಕಡೆ ಮೇಲ್ಸೇತುವೆ ನಿರ್ಮಾಣವಾಗುವಲ್ಲಿವರೆಗೆ ಸ್ಥಳೀಯ ವಾಹನಗಳಿಂದ ಟೋಲ್‌ ಸಂಗ್ರಹಿಸದಂತೆ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸಂಸದ ನಳಿನ್‌ ಕುಮಾರ್‌ ಅವರು ಗುತ್ತಿಗೆ ಸಂಸ್ಥೆಯ ಯೋಜನಾ ನಿರ್ದೇಶಕ ಶಂಕರ್‌ ಅವರಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next