Advertisement

ಪಂಪ್‌ವೆಲ್‌, ತೊಕ್ಕೊಟ್ಟು ಫ್ಲೈಓವರ್‌ ಜನವರಿಗೆ ಪೂರ್ಣ: ನವಯುಗ ವಚನ

03:40 AM Aug 28, 2018 | Team Udayavani |

ಮಂಗಳೂರು: ಆಮೆಗತಿಯಲ್ಲಿ ಸಾಗುತ್ತಿರುವ ಪಂಪ್‌ವೆಲ್‌ ಹಾಗೂ ತೊಕ್ಕೊಟ್ಟು ಫ್ಲೈಓವರ್‌ ಕಾಮಗಾರಿಯನ್ನು ಜನವರಿಯೊಳಗೆ ಪೂರ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ನವಯುಗ ಕಂಪೆನಿ ಆಡಳಿತ ನಿರ್ದೆಶಕ ಶ್ರೀಧರ್‌ ಒಪ್ಪಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಕಚೇರಿಯಲ್ಲಿ ಸೋಮವಾರ ರಾ.ಹೆ. ಪ್ರಾಧಿಕಾರ ಹಾಗೂ ರಾಜ್ಯ ರಾ.ಹೆ. ಇಲಾಖೆಯ ಅಧಿಕಾರಿಗಳು, ನವಯುಗ ಆಡಳಿತ ನಿರ್ದೇಶಕರು ಹಾಗೂ ಜಿಲ್ಲೆಯ ಶಾಸಕರ ಸಭೆ ಜರಗಿದ್ದು, ಜಿಲ್ಲೆಯಲ್ಲಿ ರಾ.ಹೆ.ಗೆ ಸಂಬಂಧಪಟ್ಟ ವಿವಿಧ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ. ಕಾಮಗಾರಿಗೆ ವೇಗ ನೀಡುವಂತೆ ಸಚಿವ ಗಡ್ಕರಿ ನವಯುಗ ಸಂಸ್ಥೆಗೆ ನಿರ್ದೇಶನ ನೀಡಿದ್ದಾರೆ ಎಂದು ಸಂಸದರು ಹೇಳಿದ್ದಾರೆ.

Advertisement

ಬಿ.ಸಿ. ರೋಡು – ಅಡ್ಡಹೊಳೆ ರಾ. ಹೆ. ಚತುಷ್ಪಥ ಕಾಮಗಾರಿಯಲ್ಲಿ 4 ಕಿ.ಮೀ. ಭಾಗ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್‌ ನನೆಗುದಿಯಲ್ಲಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ಇತ್ಯರ್ಥಗೊಳಿಸುವಂತೆ ರಾ. ಹೆ. ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಕುಲಶೇಖರ – ಕಾರ್ಕಳ ರಾ. ಹೆ. ಚತುಷ್ಪಥ ಕಾಮಗಾರಿಗೆ ಡಿಪಿಆರ್‌ ಆಗಿದ್ದು, ರಾಜ್ಯ ಸರಕಾರದ ಸಹಕಾರ ಪಡೆದು ಅಕ್ಟೋಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಭಾರತ್‌ ಮಾಲಾ ಯೋಜನೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಿ.ಸಿ. ರೋಡು- ಕಟೀಲು- ಮೂಲ್ಕಿ ಹಾಗೂ ತೊಕ್ಕೊಟ್ಟು- ಕೊಣಾಜೆ- ಮೆಲ್ಕಾರ್‌ ಹೆದ್ದಾರಿ ಮೇಲ್ದರ್ಜೆ ಯೋಜನೆಗೆ ಡಿಪಿಆರ್‌ ಆಗಿದ್ದು, ಶೀಘ್ರ ಕಾರ್ಯಗತಗೊಳಿಸುವಂತೆ ಸಚಿವ ಗಡ್ಕರಿ ಸೂಚಿಸಿದ್ದಾರೆ ಎಂದು ನಳಿನ್‌ ತಿಳಿಸಿದ್ದಾರೆ. ಶಾಸಕರಾದ ಅಂಗಾರ, ಸಂಜೀವ ಮಠಂದೂರು, ಹರೀಶ್‌ ಪೂಂಜ, ಡಾ| ಭರತ್‌ ಶೆಟ್ಟಿ ಉಪಸ್ಥಿತರಿದ್ದರು.

ಶಿರಾಡಿ ಘಾಟಿ: ವಾರದೊಳಗೆ ಮುಕ್ತ; ಸೂಚನೆ
ಶಿರಾಡಿ ಘಾಟಿಯಲ್ಲಿ ಪೂರಕ ಕಾಮಗಾರಿ ಪೂರ್ತಿಗೊಳಿಸಿ ವಾರದೊಳಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸಚಿವ ಗಡ್ಕರಿ ರಾಜ್ಯದ ರಾ. ಹೆ. ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ನಳಿನ್‌ ತಿಳಿಸಿದ್ದಾರೆ.

ಸಚಿವರ ಗಮನಕ್ಕೆ ಟೋಲ್‌ಗೇಟ್‌ ಸಮಸ್ಯೆ
ರಾ.ಹೆ.ಯಲ್ಲಿ 95 ಕಿ.ಮೀ. ಅಂತರದಲ್ಲಿ 5 ಟೋಲ್‌ಗೇಟ್‌ಗಳಿದ್ದು, ಸಮಸ್ಯೆಯಾಗಿದೆ ಎಂಬುದನ್ನು ಸಚಿವರ ಗಮನಕ್ಕೆ ತರಲಾಗಿದೆ. ರಾ.ಹೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಬ್ರಹ್ಮರಕೂಟ್ಲು, ಮುಕ್ಕ ಟೋಲ್‌ಗೇಟ್‌ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ನಳಿನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next