Advertisement

‘ಇಂದಿರಾ ಕ್ಯಾಂಟೀನ್‌ ಜನಪ್ರಿಯ ಯೋಜನೆ’

11:08 AM Jul 18, 2018 | |

ಮಹಾನಗರ : ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರ ಅನುಷ್ಠಾನ ಗೊಳಿಸಿದ ಇಂದಿರಾ ಕ್ಯಾಂಟೀನ್‌ ಯೋಜನೆ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಟ್ಟಿದೆ. ಈ ಯೋಜನೆ ಜನರು ಶಾಶ್ವತವಾಗಿ ನೆನಪಿನಲ್ಲಿಡುವ ಕಾರ್ಯಕ್ರಮ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಮಹಾನಗರ ಪಾಲಿಕೆ ವ್ಯಾಪ್ತಿಯ 5ನೇ ಇಂದಿರಾ ಕ್ಯಾಂಟಿನ್‌ ಉದ್ಘಾಟಿಸಿ ಅವರು ಮಾತನಾಡಿ, ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ತಮಿಳುನಾಡಿನ ಅಮ್ಮ ಕ್ಯಾಂಟೀನ್‌ ಮಾದರಿ ಅಧ್ಯಯನ ನಡೆಸಿ ಸಚಿವ ಕೆ.ಜೆ. ಜಾರ್ಜ್‌, ಬೆಂಗಳೂರು ಮೇಯರ್‌ ಪದ್ಮಾವತಿ ಮತ್ತು ನಾನು ರೂಪರೇಖೆ ತಯಾರಿಸಿದೆವು. ದುಡಿಯುವ ಕೈಗಳು ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಆರಂಭಿಸಿದ ಯೋಜನೆ ಇಂದು ರಾಜ್ಯಾದ್ಯಂತ ಉತ್ತಮ ಯಶಸ್ವಿ ಪಡೆದುಕೊಂಡಿದೆ ಎಂದರು.

ನಿಯಮ ಸಡಿಲಿಕೆ
ಬಿಪಿಎಲ್‌ ಪಡಿತರದಾರರ ನಿಯಮ ಸಡಿಲಿಕೆ ಮಾಡಲಾಗಿದ್ದು, 1,20,000 ದೊಳಗೆ ಆದಾಯವಿರುವ ಯಾರೂ ಕೂಡ ಪಡೆಯಬಹುದು. ಪಂಪ್‌ವೆಲ್‌ನಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಬಗ್ಗೆ ಈಗಾಗಲೇ ಸಂಸದ ನಳಿನ್‌ ಕುಮಾರ್‌ ಅವರ ಜತೆ ಮಾತನಾಡಿದ್ದು, ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದರು.

ದಾಖಲೆಯಿಟ್ಟು ಆರೋಪಿಸಲಿ
ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಇಂದಿರಾ ಕ್ಯಾಂಟೀನ್‌ನಂತಹ ಜನಪರ ಕಾರ್ಯಕ್ರಮದ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ. ಯಾವುದೇ ಯೋಜನೆಯ ಬಗ್ಗೆ ಅವ್ಯವಹಾರ ಆರೋಪ ಮಾಡುವ ಬಿಜೆಪಿ ಅದಕ್ಕೆ ಪೂರಕ ದಾಖಲೆಯಿಟ್ಟು ಆರೋಪಿಸಲಿ ಎಂದರು. ಮನಪಾ ಕಮಿಷನರ್‌ ಮೊಹಮ್ಮದ್‌ ನಝೀರ್‌ ಪ್ರಸ್ತಾವಿಸಿ, ಉರ್ವಸ್ಟೋರ್‌, ಲೇಡಿಗೋಷನ್‌, ಕಾವೂರು, ಸುರತ್ಕಲ್‌ ಮಾರ್ಕೆಟ್‌ ಬಳಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿದ್ದು, ಪಂಪ್‌ವೆಲ್‌ 5ನೇ ಕ್ಯಾಂಟೀನ್‌. ವರ್ಷಕ್ಕೆ ಶೇ.70ರಷ್ಟು (2.20ಕೋಟಿ ರೂ.) ಅನುದಾನ ಮನಪಾ ಆಡಳಿತ ನೀಡುತ್ತಿದೆ ಎಂದರು.

ಪಂಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡ ಗೌಡ ಉದ್ಘಾಟನೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಉಪಮಹಾಪೌರ ಕೆ. ಮಹಮ್ಮದ್‌, ಮಾಜಿ ಮೇಯರ್‌ಗಳಾದ ಕವಿತಾ ಸನಿಲ್‌, ಶಶಿಧರ್‌ ಹೆಗ್ಡೆ, ಕಾರ್ಪೊರೇಟರ್‌ ಗಳಾದ ಪ್ರವೀಣ್‌ಚಂದ್ರ ಆಳ್ವ, ನವೀನ್‌ ಡಿಸೋಜಾ, ಲತಾ ಸಾಲ್ಯಾನ್‌, ಆಶಾ ಡಿ’ಸಿಲ್ವಾ, ಅಬ್ದುಲ್‌ ರವೂಫ್‌, ಅಶೋಕ್‌ ಟಿ.ಕೆ. ನಾಗವೇಣಿ, ಅಪ್ಪಿ, ಕೆಪಿಸಿಸಿ ಸದಸ್ಯ ಕೇಶವ್‌, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

ಒಳ್ಳೆಯ ಪ್ರತಿಕ್ರಿಯೆ
ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ಬಡವರ ಪರ ಕಾಳಜಿಯಿಂದ ರಾಜ್ಯ ಸರಕಾ ಇಂದಿರಾ ಕ್ಯಾಂಟೀನ್‌ ಆರಂಭಿಸಿದ್ದು, ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಸಿದ ಜನಸಾಮಾನ್ಯನಿಗೆ ಅನ್ನ ನೀಡುವ ಕೆಲಸವಾಗುತ್ತಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next