Advertisement
ನಗರದ ಜನತೆ ಕನಸು ಕಂಡದ್ದೇ ಬಂತು. ಕಳೆದ ವರ್ಷದ ಕೊನೆಯಲ್ಲಾದರೂ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸವಾರರು ಟ್ರಾಫಿಕ್ ಮುಕ್ತವಾಗಿ ಸಂಚರಿಸಬಹುದು ಎಂಬ ಆಶಯ ಸಾರ್ವಜನಿಕರದ್ದಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಫೆಬ್ರವರಿ ಅಂತ್ಯ ದೊಳಗೆ ಈ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸದರು, ಗುತ್ತಿಗೆ ವಹಿಸಿರುವ ನವಯುಗ ನಿರ್ಮಾಣ ಕಂಪೆನಿಗೆ ಗಡುವು ನೀಡಿದ್ದಾರೆ. ಆದರೆ ಈ ಫ್ಲೈಓವರ್ ಕೆಲಸ ಪೂರ್ಣ ಪ್ರಮಾಣದಲ್ಲಿ ಮುಗಿಯಲು ಕಡಿಮೆ ಅಂದರೂ ಸುಮಾರು ಎರಡು ತಿಂಗಳು ಬೇಕಿದೆ. ಹೀಗಿರುವಾಗ, ಗುತ್ತಿಗೆ ದಾರರು ಕ್ರಿಮಿನಲ್ ಪ್ರಕರಣದ ತೂಗುಗತ್ತಿ ಯಲ್ಲಿಯೇ ಕೆಲಸ ಮುಂದುವರಿಸಬೇಕಾದ ಸ್ಥಿತಿಯಲ್ಲಿರುವುದು ವಾಸ್ತವ.
Related Articles
Advertisement
ಪಂಪ್‌ವೆಲ್‌ನಿಂದ ಕಂಕನಾಡಿಗೆ ತೆರಳುವ ರಸ್ತೆ ಬಳಿ ಸಣ್ಣ ಕಾಲುವೆಯೊಂದಿದ್ದು, ಇದರ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು 10 ಮಂದಿ ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರನ್ನು ಕೇಳಿದಾಗ, ಕಾಲುವೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 15-20 ದಿನಗಳು ಬೇಕು ಎನ್ನುತ್ತಾರೆ.
ಈ ಬಗ್ಗೆ ‘ಸುದಿನ’ವು ನವಯುಗ್ ಸಂಸ್ಥೆಯನ್ನು ಸಂಪರ್ಕಿಸಿದಾಗ, ಅಲ್ಲಿನ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಮಾಧ್ಯಮದ ಜತೆಗೆ ಮಾತನಾಡಬಾರದು ಎನ್ನುವ ಕಟ್ಟಪ್ಪಣೆ ಮೇಲಧಿಕಾರಿಗಳಿಂದ ಬಂದಿದೆ ಎಂದು ಕಂಪೆನಿಯ ಎಂಜಿನಿಯರ್‌ಗಳು ಹೇಳಿದ್ದಾರೆ.
ಮುಗಿಯದ ಕಾಮಗಾರಿಪಂಪ್ವೆಲ್ ಮೇಲ್ಸೇತುವೆಯು ಒಟ್ಟು 600 ಮೀಟರ್ ಉದ್ದ , 20 ಮೀಟರ್ ಅಗಲ ಹೊಂದಿರಲಿದ್ದು, ಕಾಮಗಾರಿಗೆ 2010ರಲ್ಲಿಯೇ ಚಾಲನೆ ನೀಡಲಾಗಿತ್ತು. ಮೊದಲ ಆರು ವರ್ಷದಲ್ಲಿ ಕುಂಠುತ್ತಾ ಸಾಗಿದ ಕಾಮಗಾರಿಯು ಕಳೆದ ಮೂರು ವರ್ಷಗಳ ಹಿಂದೆ ವೇಗ ಪಡೆಯಿತು. ಈ ಬಾರಿಯ ಮಳೆಗಾಲದಲ್ಲಿ ಕಾಮಗಾರಿ ಮತ್ತೆ ಆಮೆಗತಿಗೆ ತಿರುಗಿತು. 2019ರ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಸಂಸದರು ನವಯುಗ್ ಸಂಸ್ಥೆಯ ಮೇಲೆ ಒತ್ತಡ ತಂದರೂ, ಇದು ಸಾಧ್ಯವಾಗಲಿಲ್ಲ. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಟೀಕೆ ವ್ಯಕ್ತವಾಗಿದೆ. ಫೇಸ್‌ಬುಕ್‌ನಲ್ಲಿ ಟ್ರೆಂಡ್ ಆಗಿರುವ 10 ವರ್ಷದ ಚಾಲೆಂಜ್‌ನಲ್ಲಿ ಪಂಪ್‌ವೆಲ್ ಮೇಲ್ಸೇತುವೆ ಚಿತ್ರ ಬಳಸಿ ಹತ್ತು ವರ್ಷಗಳ ಹಿಂದೆ ಇದ್ದ ಪಂಪ್‌ವೆಲ್ ವೃತ್ತ ಮತ್ತು ಈಗಿನ ಮೇಲ್ಸೇತುವೆ ಕಾಮಗಾರಿ ಸ್ಥಿತಿಯನ್ನು ಹೋಲಿಕೆ ಮಾಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಫೆಬ್ರವರಿ ಅಂತ್ಯಕ್ಕೆ ಉದ್ಘಾಟನೆ ಖಂಡಿತ
ಸಂಸದ ನಳಿನ್ ಕುಮಾರ್ ಕಟೀಲು ಸುದಿನಕ್ಕೆ ಪ್ರತಿಕ್ರಿಯಿಸಿ, ಫೆಬ್ರವರಿಯಲ್ಲಿ ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಫೆಬ್ರವರಿ ವೇಳೆಗೆ ಎರಡೂ ಮೇಲ್ಸೇತುವೆ ಕಾಮಗಾರಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ನವಯುಗ್ ಸಂಸ್ಥೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ. ನವಯುಗ್ ಸಂಸ್ಥೆಯವರು ಈ ಹಿಂದೆಯೇ ಅನೇಕ ಬಾರಿ ಗಡುವು ನೀಡಿದ್ದರೂ ಆ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಜ. 28ಕ್ಕೆ ನವಯುಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಂಗಳೂರಿಗೆ ಆಗಮಿಸಲಿದ್ದಾರೆ. ಆ ವೇಳೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ಒಂದುವೇಳೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಂಪೆನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಖಚಿತ ಎಂದಿದ್ದಾರೆ. ಕಾಮಗಾರಿಗೆ ವೇಗ
ನವಯುಗ್ ಸಂಸ್ಥೆಯ ಹಣಕಾಸಿನ ಕೊರತೆಯಿಂದ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿಸಿದೆ. ಸದ್ಯ ಫ್ಲೆ ೖಓವರ್ ಸಮಾನಾಂತರವಾಗಿ ಮಣ್ಣು ಹಾಕುವ ಕೆಲಸ ನಡೆಯುತ್ತಿದೆ. ವೇಗವಾಗಿ ಪೂರ್ಣಪ್ರಮಾಣದ ಕಾಮಗಾರಿ ಪೂರ್ಣಗೊಳ್ಳಲಿದೆ.
– ಸ್ಯಾಮ್ಸನ್ ವಿಜಯಕುಮಾರ್,
ಎನ್‌ಎಚ್ಎಐ ಯೋಜನ ನಿರ್ದೇಶಕ ಸ್ಥಳದಲ್ಲಿ ಮೇಲ್ವಿಚಾರಕರಿಲ್ಲ
ಒಂದೆಡೆ ಕಾಮಗಾರಿ ನಡೆಯುತ್ತಿದ್ದರೆ ಅದನ್ನು ಗಮನಿಸಿ, ಸರಿ ತಪ್ಪು ಹೇಳಲು ಸ್ಥಳದಲ್ಲಿ ಹೆದ್ದಾರಿ ಪ್ರಾಧಿಕಾರದ ಮೇಲ್ವಿಚಾರಕರಿಲ್ಲ. ಮೇಲ್ವಿಚಾರಕರು ಕಾಮಗಾರಿ ಸ್ಥಳಕ್ಕೆ ಬಂದರೂ ಮೇಲ್ಸೇತುವೆ ಕೆಳಗೆ ಕೂತು ಮೊಬೈಲ್‌ನಲ್ಲಿ ಮಾತನಾಡುತ್ತಾ, ಕಾಲ ಕಳೆಯುತ್ತಾರೆ. ಸ್ಥಳದಲ್ಲೇ ಎಂಜಿನಿಯರ್ ಇದ್ದು, ಕೆಲಸ ಮಾಡಿಸಬೇಕಾದ ಅನಿವಾರ್ಯವಿದ್ದು, ಇವರಿಲ್ಲದ ಕಾರಣ, ಕಾರ್ಮಿಕರು ವೇಗವಾಗಿ ಕೆಲಸ ನಿರ್ವಹಿಸುತ್ತಿಲ್ಲ. ವಾಹನ ಸವಾರರಿಗೆ ಸಂಕಷ್ಟ
ಎಂಟು ವರ್ಷಗಳಿಂದ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಇದು ಜಿಲ್ಲೆಗೆ ಕಪ್ಪು ಚುಕ್ಕೆ. ಕೇವಲ ಬೆರಳೆಣಿಕೆಯ ಮಂದಿ ಮಾತ್ರ ಕಾರ್ಮಿಕರು ಕೆಲಸ ನಡೆಸುತ್ತಿದ್ದಾರೆ. ಅರೆಬರೆ ಕಾಮಗಾರಿಯಿಂದಾಗಿ ವಾಹನ ಸವಾರರು ಕಷ್ಟಪಡುತ್ತಿದ್ದಾರೆ.
– ಶಶಿಧರ್ ಪಿ.ಕೆ
ವಾಹನ ಸವಾರ ವಿಶೇಷ ವರದಿ