Advertisement

ಪಂಪ್‌ವೆಲ್‌ ಫ್ಲೈಓವರ್‌: ಎರಡು ವರ್ಷಗಳ ಬಳಿಕ ಉರಿದ ಬೀದಿ ದೀಪ !

02:51 PM Sep 13, 2022 | Team Udayavani |

ಮಹಾನಗರ: ಸುಮಾರು ಎರಡು ವರ್ಷಗಳಿಂದ ಬೀದಿ ದೀಪ ಉರಿಯದೆ ಕತ್ತಲೆಯಲ್ಲಿದ್ದ ಪಂಪ್‌ ವೆಲ್‌ ಫ್ಲೈಓವರ್‌ನಲ್ಲಿ ಬಲ್ಬ್ ಗಳು ಉರಿಯುತ್ತಿವೆ.

Advertisement

2020ರ ಜನವರಿ 31ರಂದು ಪಂಪ್‌ ವೆಲ್‌ ಮೇಲ್ಸೇತುವೆ ಉದ್ಘಾಟನೆಗೊಂಡಿತ್ತು. ಉದ್ಘಾಟನೆಗಾಗಲೇ ಮೇಲ್ಸೇತುವೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ, ಮಹಾನಗರ ಪಾಲಿಕೆ ಸಮನ್ವಯದ ಕೊರತೆಯಿಂದ ಬೀದಿ ದೀಪಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿಲ್ಲ. ಫ್ಲೈಓವರ್‌ ಮೇಲ್ಗಡೆ ಬೀದಿ ದೀಪ ಉರಿಸಲು ಟೋಲ್‌ ಶುಲ್ಕ ಏರಿಸಬೇಕೆಂಬ ಬೇಡಿಕೆಯನ್ನು ಗುತ್ತಿಗೆ ಸಂಸ್ಥೆ ನವಯುಗ ಹೇಳುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಕೆಲವು ಸಮಯದ ಹಿಂದೆ ಚರ್ಚೆ ಆರಂಭದ ಬಳಿಕ ಪಂಪ್‌ ವೆಲ್‌ ಮೇಲ್ಸೇತುವೆಗೆ ಅಳವಡಿಸಿದ್ದ ಬಲ್ಬ್ ಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

“ಪಂಪ್‌ವೆಲ್‌ ಮೇಲ್ಸೇತುವೆಯ ಎರಡೂ ಬದಿಗಳಲ್ಲಿ ತಲಾ 18 ಕಂಬಗಳಿದ್ದು, 36 ಬಲ್ಬ್ ಗಳಿವೆ. ರಸ್ತೆ ವಿಭಜಕದಲ್ಲಿ 8 ಕಂಬಗಳಿದ್ದು, 16 ಬಲ್ಬ್ ಗಳಿವೆ. ಇದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ ಕಾರಣ ತಿಂಗಳಿಗೆ ಸುಮಾರು 6 ಲಕ್ಷ ರೂ. ಹೆಚ್ಚುವರಿ ವಿದ್ಯುತ್‌ ಬಿಲ್‌ ಬರಲಿದೆ. ನಂತೂರಿನಿಂದ ನೇತ್ರಾವತಿ ನದಿ ಬದಿಯವರೆಗೆ ರಾಷ್ಟ್ರೀಯ ಹೆದ್ದಾರಿಗೆ ಒಂದೇ ಟ್ರಾನ್ಸ್‌ಫರ್ಮರ್‌ಗೆ ಸಂಪರ್ಕ ಕಲ್ಪಿಸಲಾಗಿದೆ’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು.

“ಸುದಿನ’ ವರದಿ

ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಬೀದಿ ದೀಪ ಉರಿಯದೆ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿತ್ತು. ಈ ನಿಟ್ಟಿನಲ್ಲಿ “ಕತ್ತಲಲ್ಲಿದೆ ಪಂಪ್‌ವೆಲ್‌ ಮೇಲ್ಸೇತುವೆ’ ಎಂಬ ಶೀರ್ಷಿಕೆಯಲ್ಲಿ “ಉದಯವಾಣಿ ಸುದಿನ’ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಾಲಿಕೆ ಅಧಿಕಾರಿ ಗಳು ಸಂಸದರ, ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿದ್ದರು. ಇದೀಗ ಪಂಪ್‌ವೆಲ್‌ ಮೇತ್ಸೇತುವೆಯ ಬೀದಿ ದೀಪಗಳು ಉರಿಯಲು ಆರಂಭಿಸಿದೆ.

Advertisement

ಸಭೆ ನಡೆಸಲಾಗಿದೆ: ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಬೀದಿ ದೀಪಕ್ಕೆ ವಿದ್ಯುತ್‌ ಸಂಪರ್ಕ ನೀಡಿರಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಸಂಸದರು ಮತ್ತು ನಾನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಇಲ್ಲಿನ ವಿದ್ಯುತ್‌ ಕಂಬಗಳಿಗೆ ವಿದ್ಯುತ್‌ ಸಂಪರ್ಕ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಸದ್ಯ ಬಲ್ಬ್ ಗಳು ಉರಿಯುತ್ತಿವೆ. –ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next