ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರುವರಿ 14ರಂದು ಸಿಆರ್ ಪಿಎಫ್ ವಾಹನದ ಮೇಲೆ ನಡೆದ ದಾಳಿ ಗುಪ್ತಚರ ಇಲಾಖೆಯ ವೈಫಲ್ಯವಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟನೆ ನೀಡಿದೆ.
ಪುಲ್ವಾಮಾ ದಾಳಿ ಗುಪ್ತಚರ ಇಲಾಖೆಯ ವೈಫಲ್ಯದಿಂದ ಸಂಭವಿಸಿಲ್ಲ ಎಂದು ಗೃಹಸಚಿವಾಲಯದ ರಾಜ್ಯ ಖಾತೆ ಸಚಿವ ಜಿ.ಕಿಶನ್ ರೆಡ್ಡಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಕಳೆದ 30ವರ್ಷಗಳಿಂದ ಭಯೋತ್ಪಾದನೆಯಿಂದ ನಲುಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಸೇನಾಪಡೆ ನೂರಾರು ಉಗ್ರರನ್ನು ಹೊಡೆದುರುಳಿಸಿದೆ.
ದೇಶದಲ್ಲಿ ವಿವಿಧ ಭದ್ರತಾ ಮತ್ತು ಗುಪ್ತಚರ ಇಲಾಖೆಗಳಿವೆ. ಅವುಗಳು ದಾಳಿಯ ಮುಸ್ಸೂಚನೆ ಸೇರಿದಂತೆ ವಿವಿಧ ಎಚ್ಚರಿಕೆಯನ್ನು ಸಕಾಲಕ್ಕೆ ಇಲಾಖೆಗಳ ಜೊತೆ ಸಂಘಟಿತವಾಗಿ ಕಾರ್ಯನಿರ್ವಹಿಸುವ ಮೂಲಕ ಗುಪ್ತಚರ ವರದಿಯನ್ನು ನೀಡಲಾಗುತ್ತದೆ ಎಂದು ರೆಡ್ಡಿ ವಿವರಿಸಿದರು.
ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಸರ್ಕಾರ ಕಠಿಣವಾಗಿ ಮತ್ತು ಶೀಘ್ರವಾಗಿ ಕಾರ್ಯಪ್ರವೃತ್ತವಾಗಿತ್ತು ಎಂದು ಸಮರ್ಥನೆ ನೀಡಿದ ರೆಡ್ಡಿ, ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡಾ ಪುಲ್ವಾಮಾ ದಾಳಿಯ ಸಂಚುಕೋರರನ್ನು, ಆತ್ಮಹತ್ಯಾ ದಾಳಿಕೋರರನ್ನು ಮತ್ತು ವಾಹನ ನೀಡಿದವರನ್ನು ಪತ್ತೆ ಹಚ್ಚಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ನಮ್ಮ ಸರ್ಕಾರದ ನೀತಿಯಾಗಿದೆ. ಅಷ್ಟೇ ಅಲ್ಲ ಕಳೆದ ಕೆಲವು ವರ್ಷಗಳಲ್ಲಿ ನೂರಾರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಮಾಹಿತಿ ನೀಡಿದರು.