ಮಂಡ್ಯ:ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಗುರು ಅವರ ಕುಟುಂಬದವರನ್ನು ಕೆಮಿಷ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಭೇಟಿ ಮಾಡಿ ಸಾಂತ್ವನ ಹೇಳಿದೆ. ಅಲ್ಲದೇ ಈ ಸಂದರ್ಭದಲ್ಲಿ ಭಾನುವಾರದ ಚಿತ್ರಮಂದಿರದ ಕಲೆಕ್ಷನ್ ಮೊತ್ತವನ್ನು ಗುರು ಅವರ ಕುಟುಂಬಕ್ಕೆ ಚೆಕ್ ಮೂಲಕ ಚಿತ್ರತಂಡ ನೀಡಿದೆ.
ಇತ್ತೀಚೆಗೆ ಪುಲ್ವಾಮದಲ್ಲಿ ಪಾಕಿಸ್ತಾನದ ಮೂಲದ ಜೈಷ್ ಎ ಮೊಹಮ್ಮದ್ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದ ಪರಿಣಾಮ ಮಂಡ್ಯದ ಗುಡಿಗೆರೆ ಯೋಧ ಗುರು ಸೇರಿದಂತೆ 40 ಮಂದಿ ಯೋಧರು ಹುತಾತ್ಮರಾಗಿದ್ದರು.
ಕೆಮಿಷ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಮಂಗಳವಾರ ಮಂಡ್ಯದ ಗುಡಿಗೆರೆಗೆ ತೆರಳಿ, ಯೋಧ ಗುರು ಅವರ ಕುಟುಂಬ ವರ್ಗದವರನ್ನು ಭೇಟಿಯಾಗಿ ಸಾಂತ್ವನ ಹೇಳಿತ್ತು. ಈ ಸಂದರ್ಭದಲ್ಲಿ ಗುರು ಅವರ ತಂದೆ ಹೊನ್ನಯ್ಯ, ಪತ್ನಿ ಕಲಾವತಿ ಅವರಿಗೆ ಚಿತ್ರತಂಡ ಚೆಕ್ ನೀಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟ ತಬಲ ನಾಣಿ ಅವರು, ದೇಶ ಕಾಯುವವರು ದೇವರು ಎಂಬ ಭಾವನೆ ನಮ್ಮದು. ಗುರು ಅವರ ಅಂತಿಮ ದರ್ಶನ ಪಡೆಯಲು ಕೂಡ ಅಂದು ಆಗಮಿಸಿದ್ದೇವು. ಆದರೆ ಆ ವೇಳೆ ಕುಟುಂಬಸ್ಥರನ್ನು ಮಾತನಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಇಡೀ ತಂಡ ಭೇಟಿ ನೀಡಿ ಸಾಂತ್ವನ ಹೇಳಿದ್ದೇವೆ. ನಮ್ಮ ತಂಡದಿಂದ ಕಿರು ಸಹಾಯವನ್ನು ಕುಟುಂಬಸ್ಥರಿಗೆ ನೀಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಟರಾದ ತಬಲನಾಣಿ, ಅಪೂರ್ವಶ್ರೀ, ಸಂಜನಾ ಆನಂದ್, ನಿರ್ದೇಶಕ ಕುಮಾರ್, ನಿರ್ಮಾಪಕರಾದ ಡಾ.ಡಿ.ಎಸ್.ಮಂಜುನಾಥ್ ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀನಿವಾಸ್ ಉಪಸ್ಥಿತರಿದ್ದರು.