Advertisement

ಪುಲ್ವಾಮಾ ದಾಳಿ: NIA ತನಿಖೆ ನೆರವಾದದ್ದು ಮೊಬೈಲ್ ಫೋನ್, 13 ಸಾವಿರ ಪುಟಗಳ ಚಾರ್ಜ್ ಶೀಟ್

06:18 PM Aug 25, 2020 | Nagendra Trasi |

ನವದೆಹಲಿ:ಕಳೆದ ವರ್ಷ ಫೆಬ್ರುವರಿ 14ರಂದು ಸಂಭವಿಸಿದ್ದ ಪುಲ್ವಾಮಾ ಉಗ್ರರ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಮಂಗಳವಾರ (ಆಗಸ್ಟ್ 25, 2020) 13,500 ಪುಟಗಳ ಚಾರ್ಜ್ ಶೀಟ್ ಅನ್ನು ಜಮ್ಮು ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ವರದಿ ತಿಳಸಿದೆ.

Advertisement

ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಪುಲ್ವಾಮಾ ದಾಳಿ ಪ್ರಕರಣದ ಆರೋಪ ಪಟ್ಟಿಯಲ್ಲಿ ದಾಳಿಯ ಮಾಸ್ಟರ್ ಮೈಂಡ್, ಪಾಕಿಸ್ತಾನ ಮೂಲದ ಜೈಶ್ ಎ ಮೊಹ್ಮದ್ ವರಿಷಠ ಮಸೂದ್ ಅಝರ್, ಸಹೋದರರಾದ ರೌಫ್ ಅಜ್ಗಾರ್ ಮತ್ತು ಮೌಲಾನಾ ಮೊಹಮ್ಮದ್ ಅಮ್ಮರ್ ಹೆಸರನ್ನು ನಮೂದಿಸಲಾಗಿದೆ ಎಂದು ವರದಿ ವಿವರಿಸಿದೆ.

ಪುಲ್ವಾಮಾ ದಾಳಿ ಪ್ರಕರಣದ ಚಾರ್ಜ್ ಶೀಟ್ ಅನ್ನು ಜಮ್ಮು ವಿಶೇಷ ನ್ಯಾಯಾಲಯಕ್ಕೆ ಎನ್ ಐಎ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಬಲ್ವಾಲ್ ಸಲ್ಲಿಸಿದ್ದಾರೆ.

ದಾಳಿಗೆ ಸಂಬಂಧಿಸಿದಂತೆ ಎನ್ ಐಎ ಮೊಹಮ್ಮದ್ ಉಮರ್ ಫಾರೂಖ್ ನಿಂದ ದೊಡ್ಡ ಪ್ರಮಾಣದಲ್ಲಿಯೇ ಸಾಕ್ಷ್ಯವನ್ನು ಸಂಗ್ರಹಿಸಿದೆ. ಪುಲ್ವಾಮಾ ದಾಳಿಯ ಪ್ರಮುಖ ರೂವಾರಿ ಮಸೂದ್ ಅಜರ್ ನ ಸಂಬಂಧಿ ಹಾಗೂ ಐಸಿ-814 ವಿಮಾನ ಅಪಹರಣಕಾರ ಅಜರ್ ಪುತ್ರ ಮೊಹಮ್ಮದ್ ಉಮರ್ ಫಾರೂಖ್ ಎಂದು ವಿವರಿಸಿದೆ. ಉಮರ್ ಫಾರೂಖ್ ಹಾಗೂ ಐಇಡಿ ತಜ್ಞ ಕಮ್ರಾನ್ ಖಾನ್ ನನ್ನು ಕಳೆದ ವರ್ಷ ಮಾರ್ಚ್ ನಲ್ಲಿ ಹೊಡೆದುರುಳಿಸಲಾಗಿತ್ತು ಎಂದು ವರದಿ ವಿವರಿಸಿದೆ.

ಈ ಎನ್ ಕೌಂಟರ್ ಸಂದರ್ಭದಲ್ಲಿ ವಶಪಡಿಸಿಕೊಂಡ ಫೋನ್ ನಿಂದಾಗಿ ಜೈಶ್ ಸಂಘಟನೆಯ ಸಂಚು ಬಯಲಾಗಿತ್ತು. ಹೀಗೆ ವಶಪಡಿಸಿಕೊಂಡ ಫೋನ್ ನಿಂದಾಗಿ ಪ್ರಕರಣದ ತನಿಖೆಗೆ ಟರ್ನಿಂಗ್ ಪಾಯಿಂಟ್ ಆಗಿ ಬಿಟ್ಟಿತ್ತು.

Advertisement

ಎನ್ ಐಎ ತನಿಖೆಯನ್ನು ಕೈಗೆತ್ತಿಕೊಂಡ ನಂತರ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತ್ತು. ಇದರಿಂದ ಹಲವಾರು ಫೋಟೋಗಳು ಸಿಕ್ಕಿದ್ದವು, ವಾಟ್ಸಪ್ ಚಾಟ್ಸ್ ಮತ್ತು ಜೆಇಎಂ ಶಾಮೀಲಾಗಿದ್ದ ವಿಡಿಯೋಗಳು ಮೊಬೈಲ್ ನಲ್ಲಿ ದೊರಕುವ ಮೂಲಕ ಪ್ರಕರಣಕ್ಕೆ ಬೇಕಾಗಿದ್ದ ಅಗತ್ಯ ದಾಖಲೆಗಳು ಲಭ್ಯವಾಗಿರುವುದಾಗಿ ವರದಿ ವಿವರಿಸಿದೆ.

ಪುಲ್ವಾಮಾ ದಾಳಿ ನಡೆದ ಸಂದರ್ಭದಲ್ಲಿ ಉಮರ್ ಫಾರೂಖ್ ಹಲವಾರು ಫೋಟೋ ಹಾಗೂ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದ. ಅಷ್ಟೇ ಅಲ್ಲ ಐಇಡಿ ಸ್ಫೋಟದ ಮೂಲಕ ನಡೆಸಿದ ಉಗ್ರ ಕೃತ್ಯದ ಫೋಟೋವನ್ನು ಪಾಕಿಸ್ತಾನ ನಂಬರ್ ಗೆ ಫಾರೂಖ್ ಕಳುಹಿಸಿದ್ದ ಎಂದು ಎನ್ ಐಎ ಅಧಿಕಾರಿಗಳು ವಿವರಿಸಿದ್ದಾರೆ.

ಎನ್ ಐಎ ಪ್ರಕಾರ, ಈ ಫೋಟೋವನ್ನು 2019ರ ಫೆಬ್ರುವರಿ 5ರಂದು ತೆಗೆಯಲಾಗಿತ್ತು. ಉಮರ್ ಫಾರೂಖ್ (ಎಡಗಡೆ), ಸಮೀರ್ ದಾರ್ (ಮಧ್ಯ) ಹಾಗೂ ಅದಿಲ್ ಅಹ್ಮದ್ ದಾರ್ (ಸೂಸೈಡ್ ಬಾಂಬರ್) ಐಇಡಿಯನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಫೆ.6ರಂದು ಮಾರುತಿ ಕಾರಿಗೆ 200 ಕೆಜಿಯಷ್ಟು ಐಇಡಿಯ ಡ್ರಮ್ಸ್ ತುಂಬಿಸಿ ಯೋಧರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಸುವ ಸಂಚು ರೂಪಿಸಿದ್ದರು.

ಆದರೆ ಎನ್ ಐಎ ತನಿಖೆ ಪ್ರಕಾರ, 2019ರ ಫೆ.6ರಂದು ಮೊದಲ ಬಾರಿಗೆ ಸಿಆರ್ ಪಿಎಫ್ ಜವಾನರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದರು. ಆದರೆ ಹೈವೇಯಲ್ಲಿ ಭಾರೀ ಪ್ರಮಾಣದ ಹಿಮಪಾತವಾಗಿದ್ದರಿಂದ ಸ್ಫೋಟದ ಸಂಚನ್ನು ಮುಂದೂಡಿದ್ದರು. ಕಾಲ್ ರೆಕಾರ್ಡಿಂಗ್ಸ್, ವಾಟ್ಸಪ್ ಚಾಟ್ಸ್, ಆರ್ ಡಿಎಕ್ಸ್ ಫೋಟೋಗಳು ವಶಪಡಿಸಿಕೊಂಡಿದ್ದು, ಇದು ಬಲವಾದ ಪುರಾವೆಯಾಗಿದೆ ಎಂದು ಎನ್ ಐಎ ಮೂಲಗಳು ತಿಳಿಸಿವೆ.

ದಾಳಿ ನಡೆಸಲು ಸಂಚು ರೂಪಿಸಿದ್ದ ಜೈಶ್ ಉಗ್ರರು ಕೋಡ್ ಭಾಷೆಯನ್ನು ಉಪಯೋಗಿಸಿಲ್ಲ, ಬದಲಾಗಿ ವಾಟ್ಸಪ್ ಚಾಟ್ಸ್ ನ ಗೂಢಲಿಪಿಕರಣದ ಫೀಚರ್ ಉಪಯೋಗಿಸಿದ್ದರು ಎಂದು ಅಧಿಕಾರಿಯೊಬ್ಬರು ಅಚ್ಚರಿ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next