Advertisement

ಕೆಂಪು ಬಣ್ಣದ ಇಕೋ ಕಾರು ಬಳಸಿ ‘ರಕ್ತದೋಕುಳಿ’ ಹರಿಸಿದನೇ ಸೈತಾನ?

05:13 AM Feb 17, 2019 | Karthik A |

ಜೈಶ್ – ಎ- ಮಹಮ್ಮದ್ ಉಗ್ರ ಅದಿಲ್ ಅಹಮ್ಮದ್ ಪುಲ್ವಾಮಾ ಬಾಂಬ್ ಸ್ಪೋಟಕ್ಕೆ ಕೆಂಪು ಬಣ್ಣದ ಇಕೋ ಕಾರನ್ನು ಬಳಸಿರುವ ಕುರಿತಾಗಿ ಈಗ ಮಾಹಿತಿ ಲಭ್ಯವಾಗಿದೆ. ಮತ್ತು, ಪಾಕಿಸ್ಥಾನ ಮೂಲದ ರಶೀದ್ ಗಾಝಿ ಮತ್ತು ಕಮ್ರಾನ್ ಅವರನ್ನು ಪುಲ್ವಾಮ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಗಳೆಂದು ಶಂಕಿಸಲಾಗುತ್ತಿದೆ. ಸಿ.ಆರ್.ಪಿ.ಎಫ್. ಯೋಧರ ವಾಹನಗಳು ಸಾಗಿ ಬರುತ್ತಿದ್ದ ರಸ್ತೆಯಲ್ಲಿ ಓರ್ವ ವ್ಯಕ್ತಿ ಈ ಶಂಕಿತ ಕೆಂಪು ಬಣ್ಣದ ಇಕೋ ಕಾರನ್ನು ಚಲಾಯಿಸುತ್ತಿದ್ದ ಮತ್ತದು ಪದೇ ಪದೇ ಯೋಧರು ಸಾಗಿಬರುತ್ತಿದ್ದ ಹೆದ್ದಾರಿಯಲ್ಲಿ ಕಾಣಿಸುತ್ತಿತ್ತು ಎಂಬುದಾಗಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮಿಲಿಟರಿ ಮೂಲಗಳು ವರದಿ ಮಾಡಿವೆ.

Advertisement

ಯೋಧರು ಸಾಗುತ್ತಿದ್ದ ಮೂರನೇ ನಂಬರ್ ಬಸ್ಸಿನ ನಾಲ್ಕು ಗಸ್ತು ವಾಹನಗಳು ಈ ‘ಕೆಂಪು’ ಬಣ್ಣದ ಕಾರಿನಲ್ಲಿದ್ದ ವ್ಯಕ್ತಿಗೆ ಮೂರ್ನಾಲ್ಕು ಸಲ ಯೋಧರ ಬಸ್ಸುಗಳ ಸಾಲಿನಿಂದ ದೂರ ಸರಿಯುವಂತೆ ಸೂಚನೆಯನ್ನು ನೀಡಿದ್ದರೂ ಸಹ ಆ ‘ಶಂಕಿತ’ ವ್ಯಕ್ತಿ ಇವರ ಸೂಚನೆಯನ್ನು ಪಾಲಿಸಲಿಲ್ಲ ಎನ್ನಲಾಗಿದೆ. ಆ ಸಂದರ್ಭದಲ್ಲಿ ಗಸ್ತು ವಾಹನದಲ್ಲಿದ್ದವರು ಎಚ್ಚೆತ್ತುಕೊಂಡಿದ್ದಿದ್ದರೆ ಈ ಭಾರೀ ಅನಾಹುತವನ್ನು ತಪ್ಪಿಸಬಹುದಾಗಿರವ ಸಾಧ್ಯತೆಗಳಿದ್ದವು. ಆದರೆ ದುರದೃಷ್ಟವಶಾತ್ ಆ ಕೆಂಪು ಬಣ್ಣದ ವಾಹನದಲ್ಲಿ 40 ಯೋಧರ ಪ್ರಾಣ ಕಸಿಯುವ ‘ವಿಧಿ’ ಇತ್ತೆಂಬ ಕಲ್ಪನೆಯೂ ಆಗ ಯಾರಿಗೂ ಇರಲಿಲ್ಲ. ಗಸ್ತು ವಾಹನದ ಸೂಚನೆಯನ್ನು ಧಿಕ್ಕರಿಸಿದ ಆ ‘ಶಂಕಿತ’ ವ್ಯಕ್ತಿ 78 ಸಂಖ್ಯೆಯ ಸೇನಾ ವಾಹನಕ್ಕೆ ಢಿಕ್ಕಿ ಹೊಡೆಯುವ ಮುನ್ನ ಎಡ-ಬಲಕ್ಕೆ ತನ್ನ ಕಾರನ್ನು ತಿರುಗಿಸುತ್ತಾ ಅಂತಿಮವಾಗಿ ಬಸ್ಸಿಗೆ ತನ್ನ ಕಾರನ್ನು ಅಪ್ಪಳಿಸಿದ ಎಂಬ ಮಾಹಿತಿ ಇದೀಗ ತನಿಖಾ ಪಡೆಗಳಿಗೆ ಲಭ್ಯವಾಗಿದೆ. ಮಾತ್ರವಲ್ಲದೆ ಈ ವ್ಯಕ್ತಿಯು ಜಮ್ಮುವಿನಿಂದಲೇ ಸೇನಾ ಪಡೆಯ ಬಸ್ಸುಗಳನ್ನು ಫಾಲೋ ಮಾಡಿಕೊಂಡು ಬಂದಿದ್ದಾನೆ ಎಂಬ ಶಂಕೆಯೂ ಇದೀಗ ಬಲವಾಗಿ ವ್ಯಕ್ತವಾಗುತ್ತಿದೆ.

ಪಾಕಿಸ್ಥಾನ ಮೂಲದ ಉಗ್ರರಾಗಿರುವ ರಶೀದ್ ಗಾಝಿ ಮತ್ತು ಕಮ್ರಾನ್ ಅವರೇ ಈ ಭೀಕರ ದಾಳಿಯ ಮಾಸ್ಟರ್ ಮೈಂಡ್ ಗಳೆಂದು ನಂಬಲಾಗುತ್ತಿದೆ. ಇವರಿಬ್ಬರೂ ಪುಲ್ವಾಮದಲ್ಲಿರುವ ತ್ರಾಲ್ ನಗರದಲ್ಲಿದ್ದುಕೊಂಡೇ ಉಗ್ರ ಆದಿಲ್ ನನ್ನು ಈ ದಾಳಿಗೆ ಸಿದ್ಧಗೊಳಿಸಿರಬೇಕೆಂಬ ಶಂಕೆಯನ್ನು ಸೇನಾ ಮೂಲಗಳು ಬಲವಾಗಿ ವ್ಯಕ್ತಪಡಿಸುತ್ತಿವೆ. IED ಸ್ಪೋಟಕ ತಜ್ಞನಾಗಿರುವ ಗಾಝಿ ಅಫ್ಗಾನಿಸ್ಥಾನದಲ್ಲಿ ಉಗ್ರ ಹೋರಾಟದಲ್ಲಿ ಭಾಗಿಯಾಗಿದ್ದ ಮತ್ತು ಈ ಮೂಲಕ ಜೈಶ್ ಮುಖ್ಯಸ್ಥ ಮಸೂದ್ ಅಜ್ಹರ್ ಕಣ್ಣಿಗೆ ಬಿದ್ದು ಕಾಶ್ಮೀರಕ್ಕೆ ಕಳುಹಿಸಲ್ಪಟ್ಟ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದ್ದು ಇಲ್ಲಿ ಈತ ಸ್ಥಳೀಯರಿಗೆ ಸ್ಪೋಟ ತರಬೇತಿಯನ್ನು ನೀಡುತ್ತಿದ್ದ ಎನ್ನಲಾಗುತ್ತಿದೆ.​​​​​​​

Advertisement

Udayavani is now on Telegram. Click here to join our channel and stay updated with the latest news.

Next