ಮಂಡ್ಯ: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಕರ್ನಾಟಕದ ಯೋಧ ಗುರು ಅವರ ಪಾರ್ಥೀವ ಶರೀರವನ್ನು ಸೇನಾ ಹೆಲಿಕಾಪ್ಟರ್ ನಲ್ಲಿ ಹುಟ್ಟೂರಿಗೆ ರವಾನೆ ಮಾಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ರಕ್ಷಣಾ ಇಲಾಖೆಯ ಕಾರ್ಯದರ್ಶಿಯವರಿಗೆ ಮನವಿ ಮಾಡಿದ್ದಾರೆ.
ಇಂದು ಮಧ್ಯಾಹ್ನ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಹುತಾತ್ಮ ಯೋಧ ಗುರು ಅವರ ಪಾರ್ಥೀವ ಶರೀರ ತರಲಾಗುತ್ತದೆ. ಅಲ್ಲಿಂದ ಗುರು ಹುಟ್ಟೂರು ಗುಡಿಗೆರೆ ಕಾಲೋನಿಗೆ ವಿಶೇಷ ಸೇನಾ ವಾಹನದಲ್ಲಿ ಶರೀರವನ್ನು ರವಾನೆ ಮಾಡಲಾಗುವುದು. ಆದರೆ ಇದಕ್ಕೆ ಗುರು ಸ್ನೇಹಿತರು ಮತ್ತು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದು, ಸೇನಾ ಹೆಲಿಕಾಪ್ಟರ್ ನಲ್ಲಿ ತರಬೇಕೆಂದು ಆಗ್ರಹ ಮಾಡುತ್ತಿದ್ದಾರೆ.
ಸೇನಾ ಹೆಲಿಕಾಪ್ಟರ್ ನಲ್ಲಿ ಪಾರ್ಥೀವ ಶರೀರ ತರುವುದರಿಂದ ಅಂತಿಮ ದರ್ಶನಕ್ಕೆ ಹೆಚ್ಚು ಸಮಯ ದೊರಕುತ್ತದೆ ಎಂದು ಆಗ್ರಹ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ. ಯೋಧ ಗುರು ಅವರ ಅಂತ್ಯಕ್ರಿಯೆ ಸಂಜೆ 6.10 ಕ್ಕೆ ಕೆ.ಎಂ.ದೊಡ್ಡಿ ಬಳಿ ನಡೆಯಲಿದೆ.
ಹೆಲಿಪ್ಯಾಡ್ ನಿರ್ಮಾಣ: ಮಂಡ್ಯ ಜಿಲ್ಲೆಯ ಮದ್ದೂರಿನ ಹುಲಿಗೆರೆ ಗೇಟ್ ಬಳಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತಿತರ ಗಣ್ಯರು ಅಂತ್ಯಕ್ರಿಯೆಗೆ ಆಗಮಿಸುವುದರಿಂದ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಹುತಾತ್ಮ ಯೋಧನ ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಮತ್ತಿತರು ಪಾಲ್ಗೊಳ್ಳಲಿದ್ದಾರೆ
ಕುಟುಂಭಿಕರ ಆರೋಗ್ಯ ತಪಾಸಣೆ: ಕಳೆದ ಎರಡು ದಿನಗಳಿಂದ ದುಖದಲ್ಲಿರುವ ಹುತಾತ್ಮ ಯೋಧ ಅವರ ಕುಟುಂಬಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಗುರು ಚಿಕ್ಕಮ್ಮನ ಮಗಳು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.