ಪುಣೆ : ‘ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯು ಇಡಿಯ ದೇಶದ ಮೇಲೆ ನಡೆದಿರುವ ದಾಳಿಯಾಗಿದ್ದು ಇದನ್ನು ರಾಜಕೀಕರಣ ಗೊಳಿಸುವ ಯಾವುದೇ ಯತ್ನ ಯಾರಿಂದಲೂ ನಡೆಯಕೂಡದು’ ಎಂದು ಹೇಳುವ ಮೂಲಕ ಎನ್‌ಸಿಪಿ ಮುಖ್ಯಸ್ಥ ಶರತ್ ಪವಾರ್ ಅವರು ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ದಾಳಿ ನಡೆಸಿದ್ದಾರೆ.
‘ಪುಲ್ವಾಮಾದಲ್ಲಿ ನಡೆದಿರುವ ಉಗ್ರ ದಾಳಿಯನ್ನು ನಾನು ಖಂಡಿಸುತ್ತೇನೆ; ಮೃತ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಬಯಸುತ್ತೇನೆ. ಯೋಧರ ದುಃಖತಪ್ತ ಕುಟುಂಬಗಳೊಂದಿಗೆ ಇಡಿಯ ದೇಶವೇ ಇದೆ’ ಎಂದು ಪವಾರ್ ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಈ ರೀತಿಯ ಉಗ್ರ ದಾಳಿ ನಡೆದಿದ್ದಾಗ ನರೇಂದ್ರ ಮೋದಿ ಅವರು ಅಂದಿನ ದಿನಗಳಲ್ಲಿ ನೀಡಿದ್ದ ಹೇಳಿಕೆಗಳಿಗೆ ಶರತ್ ಪವಾರ್ ತಿರುಗೇಟು ನೀಡಿದರು.
“ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಅಧಿಕಾರಕ್ಕೆ ಬರುವ ಮುನ್ನ ಪುಲ್ವಾಮಾ ರೀತಿಯ ಉಗ್ರ ದಾಳಿಗಳು ನಡೆದಿದ್ದ ಸಂದರ್ಭದಲ್ಲಿ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಪಾಕಿಸ್ಥಾನಕ್ಕೆ ತಕ್ಕುದಾದ ಪಾಠ ಕಲಿಸುವ ಸಾಮರ್ಥ್ಯ ಹೊಂದಿಲ್ಲ ; ಕೇವಲ 56 ಇಂಚಿನ ಎದೆ ಅಳತೆ ಇರುವವರು ಮಾತ್ರವೇ ಪಾಕಿಸ್ಥಾನಕ್ಕೆ ಕಠಿನ ಪಾಠವನ್ನು ಕಲಿಸಬಲ್ಲರು ಎಂದು ಹೇಳುತ್ತಿದ್ದರು; ಮೋದಿ ಅವರು ಅಂದಿನ ದಿನಗಳಲ್ಲಿ ಹಾಗೆ ಹೇಳುತ್ತಿದ್ದುದು ನನಗೆ ಇಂದಿಗೂ ನೆನಪಿದೆ’ ಎಂದು ಪವಾರ್ ತಮ್ಮ ಹುಟ್ಟೂರ ಕ್ಷೇತ್ರವಾದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
“ಉಗ್ರ ದಾಳಿಗಳಿಗಾಗಿ ಪಾಕಿಸ್ಥಾನಕ್ಕೆ ಕಠಿನ ಉತ್ತರ ನೀಡಲು ಜನರು ಯುಪಿಎ ಸರಕಾರವನ್ನು ಬದಲಾಯಿಸಿ ಬಿಜೆಪಿ ಸರಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಮೋದಿ ಅಂದಿನ ದಿನಗಳಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು” ಎಂದು ಪವಾರ್ ಹೇಳಿದರು.
“ಆದರೆ ಇಂದು ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಿಂದೆ ಮೋದಿ ಮಾಡಿದ್ದ ಆಗ್ರಹವನ್ನು ನಾನು ಇಂದು ಪುನರುಚ್ಚರಿಸಲು ಬಯಸುವುದಿಲ್ಲ; 2014ರಲ್ಲಿ ಅಧಿಕಾರಕ್ಕೆ ಬರುವಲ್ಲಿ ಮೋದಿ ಬಿಂಬಿಸಿಕೊಂಡಿದ್ದ ವ್ಯಕ್ತಿತ್ವ ಇಂದು ಸಂಪೂರ್ಣವಾಗಿ, ಶೇ.100ರಷ್ಟು ವಿಫಲವಾಗಿದೆ” ಎಂದು ಪವಾರ್ ಚುಚ್ಚು ಮಾತನ್ನು ಆಡಿದ್ದಾರೆ.
ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ನಾವು ಅತ್ಯಧಿಕ ಮಹತ್ವ ಕೊಡಬೇಕಾದ ಅಗತ್ಯವಿರುವುದು ಸ್ಪಷ್ಟವಾಗಿದೆ ಎಂದು ಪವಾರ್ ಹೇಳಿದರು.