ಹೊಸದಿಲ್ಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಪುಲ್ವಾಮಾ ಮಾದರಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯು ಗುಪ್ತಚರ ಮೂಲ ಗಳಿಂದ ಬಹಿರಂಗವಾಗಿದ್ದು, ಉತ್ತರ ಮತ್ತು ಕೇಂದ್ರ ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಶ್ರೀನಗರ ಬಾರಾಮುಲ್ಲಾ ಹೆದ್ದಾರಿಯಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿದೆ. ಪುಲ್ವಾಮಾ ಮಾದರಿಯಲ್ಲಿ ಅಂದರೆ ಕಾರು ಬಾಂಬ್ ಮೂಲಕ ಈ ದಾಳಿ ನಡೆಸಿ, ಗರಿಷ್ಠ ಹಾನಿ ಉಂಟುಮಾಡಲು ಯೋಜಿಸಲಾಗಿದೆ. ರೆಹಮಾನ್ ಭಾಯಿ ಎಂಬ ವಿದೇಶಿ ಉಗ್ರನೇ ದಾಳಿಯ ಸಂಪೂರ್ಣ ಯೋಜನೆ ರೂಪಿಸಿದ್ದು, ಈ ಕೃತ್ಯಕ್ಕೆ ಉಗ್ರರನ್ನು ಸಾಗಿಸಲು ಆ್ಯಂಬುಲೆನ್ಸ್ ಅನ್ನು ಬಳಸುವ ಸಾಧ್ಯತೆಯಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಭದ್ರತೆ ಹೆಚ್ಚಳ: ಈ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ, ಪಟ್ಟಾನ್, ಸೋಪೋರ್, ಹಂದ್ವಾರಾ ಸೇರಿದಂತೆ ಕಾಶ್ಮೀರದ ಹಲವು ಭಾಗಗಳಲ್ಲಿ ಭದ್ರತಾ ಪಡೆಗಳು ಭದ್ರತೆ ಬಿಗಿ ಗೊಳಿಸಿವೆ. ಅನುಮಾನಾಸ್ಪದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವಂತೆ ಸೇನೆಯ ಗಸ್ತು ಪಡೆಗಳಿಗೆ ಸೂಚಿಸ ಲಾಗಿದೆ. ಜತೆಗೆ, ಹೆದ್ದಾರಿಯಲ್ಲಿ ಸೇನೆಯ ಯಾವುದೇ ತಂಡ ಸಂಚಾರ ಆರಂಭಿಸುವ ಮುನ್ನ ಸೂಕ್ತ ತಪಾಸಣೆ ಕೈಗೊಳ್ಳುವಂತೆಯೂ ನಿರ್ದೇಶಿಸಲಾಗಿದೆ.
ಆಲ್ಟೋ ಕಳವು: ಉಗ್ರರ ದಾಳಿ ಭೀತಿಯ ನಡುವೆಯೇ, ಬಾರಾಮುಲ್ಲಾ ಜಿಲ್ಲೆಯ ಡೆಲಿನಾ ಪ್ರದೇಶದ ಡಿಪಿಎಸ್ ಕಾಲೊನಿಯಲ್ಲಿ ಆಲ್ಟೋ ಕಾರೊಂದು ಕಳವಾಗಿರುವ ಘಟನೆ ವರದಿಯಾಗಿದೆ. ಉಗ್ರರು ಕಾರಿನ ಮೂಲಕ ದಾಳಿ ನಡೆಸುವ ಸಾಧ್ಯತೆಯಿರುವ ಕಾರಣ, ಇದು ಇನ್ನಷ್ಟು ಆತಂಕ ಮೂಡಿಸಿದೆ.
ಇಬ್ಬರು ಉಗ್ರರ ಹತ್ಯೆ: ಬಾರಾಮುಲ್ಲಾದ ನೌಗಾಮ್ ವಲ ಯದ ಎಲ್‌ಒಸಿ ಬಳಿ ಇಬ್ಬರು ಉಗ್ರರನ್ನು ಶನಿವಾರ ಭದ್ರತಾ ಪಡೆ ಹೊಡೆದುರುಳಿಸಿದೆ. ಎರಡು ಎಕೆ47 ರೈಫಲ್‌ಗಳು, ಗ್ರೆನೇಡ್‌ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
300 ಉಗ್ರರು ನುಸುಳಲು ಸಿದ್ಧ
ಗಡಿಯಾಚೆಗಿನ ಲಾಂಚ್‌ಪ್ಯಾಡ್‌ಗಳಲ್ಲಿ 250-300 ಶಸ್ತ್ರಸಜ್ಜಿತ ಉಗ್ರರು ಭಾರತದೊಳಕ್ಕೆ ನುಸುಳಲು ಸಿದ್ಧವಾಗಿ ನಿಂತಿದ್ದಾರೆ ಎಂದು ಮೇಜರ್ ಜನರಲ್ ವೀರೇಂದ್ರ ವತ್ಸ್ ಮಾಹಿತಿ ನೀಡಿದ್ದಾರೆ. ಶನಿವಾರ ಉಗ್ರರ ನುಸುಳು ಯತ್ನ ವನ್ನು ಸೇನೆ ವಿಫಲಗೊಳಿಸಿದ ಬೆನ್ನಲ್ಲೇ ಅವರು ಈ ವಿಚಾರ ತಿಳಿಸಿದ್ದಾರೆ.