Advertisement

ನಾಳೆ ರಾಜ್ಯಾದ್ಯಂತ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮ

11:31 PM Jan 17, 2020 | Lakshmi GovindaRaj |

ಬೆಂಗ‌ಳೂರು: ಜ.19ರಂದು ರಾಜ್ಯಾದ್ಯಂತ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಲ್ಲ ಪೋಷಕರು ಐದು ವರ್ಷ ದೊಳಗಿನ ತಮ್ಮ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಬೇಕು ಎಂದು ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದರು.

Advertisement

ವಿಕಾಸಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಒಂದೇ ಸುತ್ತಿನಲ್ಲಿ ಪಲ್ಸ್‌ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ರಾಜ್ಯದಲ್ಲಿ ಐದು ವರ್ಷದೊಳಗಿನ 64,65,651 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ. ಇದಕ್ಕಾಗಿ 33,021 ಬೂತ್‌ಗಳು, 46,620 ತಂಡಗಳು, 1,09,554 ಲಸಿಕಾ ಕಾರ್ಯಕರ್ತರು, 7,105 ಮೇಲ್ವಿಚಾರಕರು, 977 ಸಂಚಾರಿ ತಂಡಗಳು ಹಾಗೂ 2,111 ಟ್ರಾನ್ಸಿಟ್‌ ತಂಡಗಳನ್ನು ರಚಿಸಲಾಗಿದೆ ಎಂದರು.

ಪ್ರತಿ ಹಳ್ಳಿ, ನಗರ- ಪಟ್ಟಣ ಮಾತ್ರವಲ್ಲದೇ ಗುಡ್ಡಗಾಡು ಪ್ರದೇಶ, ಇಟ್ಟಿಗೆ ಬಟ್ಟಿ, ಕಾಮಗಾರಿ ಪ್ರದೇಶ, ವಲಸಿಗರು ನೆಲೆಸಿರುವ ಪ್ರದೇಶ, ತೋಟದ ಮನೆ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ. ಈ ಕಾರ್ಯಕ್ಕಾಗಿ ಆಶಾ- ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಇತರೆ ಸ್ವಯಂ ಸೇವಕರನ್ನು ಸಜ್ಜುಗೊಳಿಸಲಾಗಿದೆ.

ಪಲ್ಸ್‌ ಪೋಲಿಯೋ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಪೋಷಕರು ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದರು. ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಕಾರ್ಯಕ್ರಮದ ಭಾಗವಾಗಿ 1000 ಸಂಚಾರಿ ತಂಡಗಳನ್ನು ರಚಿಸಲಾಗಿದ್ದು, ಪ್ರಯಾಣ, ಪ್ರವಾಸದಲ್ಲಿರುವವರನ್ನು ಗುರುತಿಸಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಪೋಷಕರು ಸಮೀಪದ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಪಿಂಕ್‌ ಬಸ್‌ ಯೋಜನೆ: ದಶಕದ ಹಿಂದ ನಾನು ಆರೋಗ್ಯ ಸಚಿವನಾಗಿದ್ದಾಗ “108 ಆರೋಗ್ಯ ರಕ್ಷಾ ಕವಚ’ ಯೋಜನೆ ಜಾರಿಗೊಳಿಸಲಾಗಿತ್ತು. ಇದೀಗ ಪಿಂಕ್‌ ಬಸ್‌ ಯೋಜನೆ ರೂಪಿಸಲಾಗುತ್ತಿದ್ದು, ಬಜೆಟ್‌ನಲ್ಲಿ ಘೋಷಣೆಯಾಗಲಿದೆ ಎಂದ ಸಚಿವ ಬಿ.ಶ್ರೀರಾಮುಲು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ರಾಜ್ಯದ ಬಡವರು ಆಸ್ಪತ್ರೆಗಳಿಗೆ ಬಂದಾಗ ಅವರಿಗೆ ಎಲ್ಲ ರೀತಿಯ ಸವಲತ್ತು ಸಿಗಬೇಕು. ವೈದ್ಯರು, ತಜ್ಞರು, ಅರೆವೈದ್ಯ ಸಿಬ್ಬಂದಿ ಸೇವೆ ಜತೆಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗುವಂತೆ ವ್ಯವಸ್ಥೆ ಕಲ್ಪಿಸಲು ಒತ್ತು ನೀಡಲಾಗುವುದು.

Advertisement

ಈ ಬಗ್ಗೆ ಬಜೆಟ್‌ ಪೂರ್ವಭಾವಿ ಸಭೆಗಳಲ್ಲೂ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು. ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಸೌಲಭ್ಯ ಪಡೆಯುವುದಕ್ಕೆ ಸಂಬಂಧಪಟ್ಟಂತೆ ಸಾಫ್ಟ್ವೇರ್‌ನಲ್ಲಿದ್ದ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಸದ್ಯ 400 ಖಾಸಗಿ ಆಸ್ಪತ್ರೆ, 3000 ಸರ್ಕಾರಿ ಆಸ್ಪತ್ರೆಗಳನ್ನು ಯೋಜನೆಯಡಿ ಚಿಕಿತ್ಸೆಗೆ ಗುರುತಿಸಲಾಗಿದೆ. ಕೇಂದ್ರ ಸರ್ಕಾರದಿಂದಲೂ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ಅಖ್ತರ್‌, “ಆಯುಷ್ಮಾನ್‌ ಭಾರತ್‌’ ಯೋಜನೆಯಡಿ ಈವರೆಗೆ ಐದು ಲಕ್ಷ ಶಸ್ತ್ರಚಿಕಿತ್ಸೆ ಸೇರಿ ಇತರೆ ಚಿಕಿತ್ಸೆ ನೀಡಲಾಗಿದ್ದು, 1,000 ಕೋಟಿ ರೂ. ವೆಚ್ಚ ಮಾಡಲಾಗಿದೆ.

ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಸೇವೆಗಳ ಬಗ್ಗೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಬೇಕಿತ್ತು. ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಇದೀಗ ಸುಧಾರಿತ ವ್ಯವಸ್ಥೆ ತರಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲ ದಿದ್ದರೆ ಸಂಬಂಧಪಟ್ಟ ನೋಂದಾಯಿತ ಆಸ್ಪತ್ರೆಗಳ ವಿವರ ಸಿಗಲಿದ್ದು, ಯಾಂತ್ರಿಕವಾಗಿ ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಉಪಸ್ಥಿತರಿದ್ದರು.

ಇಲಾಖೆ ವತಿಯಿಂದ ಔಷಧ ಖರೀದಿಸಿ ವಿತರಣೆ: ಹಾವು ಸೇರಿ ಇತರೆ ವಿಷಜಂತುಗಳ ಕಡಿತಕ್ಕೆ ಕೆಲವೆಡೆ ಔಷಧಗಳು ಲಭ್ಯವಿಲ್ಲದಿರುವುದು ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಇಲಾಖೆಯಿಂದಲೇ ಔಷಧಗಳನ್ನು ಖರೀದಿಸಿ ಎಲ್ಲ ಆಸ್ಪತ್ರೆಗಳಿಗೆ ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ಈ ಹಿಂದೆ ಜಿಲ್ಲಾಸ್ಪತ್ರೆ ಸಮಿತಿಯಿಂದಲೇ ಔಷಧ ಖರೀದಿಸಿ ಬಳಸಲು ಅವಕಾಶ ನೀಡಲಾಗಿತ್ತು. ಆದರೆ ಕೆಲವೆಡೆ ಔಷಧ ಲಭ್ಯವಿಲ್ಲದಿರುವ ಬಗ್ಗೆ ದೂರುಗಳಿವೆ. ಹಾಗಾಗಿ ಇಲಾಖೆ ವತಿಯಿಂದ ಔಷಧಗಳನ್ನು ಖರೀದಿಸಿ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.

ಡಿಪಿಆರ್‌ಗೆ ಸಿದ್ಧತೆ – ಶ್ರೀರಾಮುಲು: ಮಂಗನ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗದಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಿಂದೆ ಸಾಗರದಲ್ಲಿ ಪ್ರಯೋಗಾಲಯ ಸ್ಥಾಪನೆ ಮಾತುಗಳಿದ್ದರೂ ತಾಂತ್ರಿಕ ಕಾರಣಕ್ಕೆ ಶಿವಮೊಗ್ಗದಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಬಿ.ಶ್ರೀರಾಮುಲು ತಿಳಿಸಿದರು. ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಮಾತನಾಡಿ, ಮಂಗನ ಕಾಯಿಲೆ ನಿಯಂತ್ರಣಕ್ಕೆ ಲಸಿಕೆ ಸಿದ್ಧಪಡಿಸುವುದು ಹಾಗೂ ಕಾಯಿಲೆ ಪತ್ತೆ ಕಾರ್ಯಕ್ಕಾಗಿ ಪ್ರಯೋಗಾಲಯ ನಿರ್ಮಾಣವಾಗಲಿದೆ. ಈ ಸಂಬಂಧ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ಸಲಹೆಯನ್ನೂ ಪಡೆಯಲಾಗಿದೆ. ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯ ನಡೆದಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next