Advertisement

Farmers: ಹದ ಮಳೆಗೆ ದ್ವಿದಳ ಧಾನ್ಯ ಬೆಳೆ ಚೇತರಿಕೆ

02:28 PM Nov 14, 2023 | Team Udayavani |

ಅರಕಲಗೂಡು: ತಾಲೂಕಿನ ಹಲವೆಡೆ ನಿರಂತರವಾಗಿ ಸುರಿಯುತ್ತಿರುವ ಹದ ಮಳೆ ಹಿಂಗಾರು ಬೆಳೆಗಳಿಗೆ ವರದಾನವಾಗಿ ಪರಿಣಮಿಸಿದ್ದು, ಅನ್ನದಾತರ ಬದುಕು ಹಸನಾಗಿಸುತ್ತಿದೆ.

Advertisement

ಮುಂಗಾರು ಮುನಿಸಿನಿಂದಾಗಿ ಈ ಬಾರಿ ರೈತರಿಗೆ ಆದಾಯ ತರುವ ಪ್ರಮುಖ ಆದಾಯ ವಾಣಿಜ್ಯ ಬೆಳೆಗಳು ನೆಲಕಚ್ಚಿದ್ದವು. ಆಲೂಗಡ್ಡೆ, ಮುಸುಕಿನ ಜೋಳ ಮತ್ತಿತರ ಲಾಭದಾಯಕ ಬೆಳೆಗಳು ಒಣಗಿ ರೈತರಿಗೆ ಆರ್ಥಿಕವಾಗಿ ನಷ್ಟ ಉಂಟಾಗಿತ್ತು. ತೀವ್ರ ಬರ ಪರಸ್ಥಿತಿಯಿಂದಾಗಿ ಬಿತ್ತಿದ ಬೆಳೆಗಳನ್ನು ಕಳೆದುಕೊಂಡು ರೈತರು ಸಾಲದ ಸುಳಿಗೆ ಸಿಲುಕುವಂತಾಗಿತ್ತು. ಇದೀಗ ಕಳೆದೊಂದು ವಾರದಿಂದ ಎಡಬಿಡದೆ ಬೀಳುತ್ತಿರುವ ಹಿಂಗಾರು ಮಳೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಹಿಂಗಾರು ಮಳೆ ಆಶಾದಾಯಕ: ಮಳೆಯಿಂದಾಗಿ ಒಣಗುತ್ತಿದ್ದ ಆಹಾರ ಬೆಳೆಯಾದ ರಾಗಿ, ಅಲಸಂದೆ, ಹುರುಳಿ ಮತ್ತಿತರ ದ್ವಿದಳ ಧಾನ್ಯ ಬೆಳೆಗಳು ಚೇತರಿಸಿಕೊಳ್ಳುತ್ತಿವೆ. ಕಸಬಾ, ಮಗ್ಗೆ, ಮಲ್ಲಿಪಟ್ಟಣ ಭಾಗದಲ್ಲಿ ಹೆಚ್ಚಾಗಿ ಜೋಳ, ಆಲೂಗಡ್ಡೆ ಬೆಳೆ ಕಟಾವು ಮುಗಿಸಿದ್ದ ರೈತರು ರಾಗಿ ಬಿತ್ತನೆ ನಡೆಸಿದ್ದರು. ಕೊಣನೂರು ಮತ್ತು ರಾಮನಾಥಪುರ ಹೋಬಳಿ ಭಾಗದಲ್ಲೂ ಅಧಿಕ ಪ್ರಮಾಣದಲ್ಲಿ ರಾಗಿ ಬಿತ್ತನೆ ನಡೆಸಲಾಗಿತ್ತು. ಮುಂಗಾರು ಬೆಳೆಗಳನ್ನು ಕಳೆದುಕೊಂಡು ಮುಗಿಲಿನತ್ತ ಮುಖ ಮಾಡಿದ್ದ ಬೆಳೆಗಾರರಿಗೆ ಈಗ ಹಿಂಗಾರು ಮಳೆ ಆಶಾದಾಯಕವಾಗಿದೆ.

4,210 ಹೆಕ್ಟೇರ್‌ನಲ್ಲಿ ಬಿತ್ತನೆ: ತಾಲೂಕಿನ ಒಟ್ಟು ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಸ್ತೀರ್ಣದ ಗುರಿ 3,805 ಹೆಕ್ಟೇರ್‌ಗಳಾಗಿದ್ದು, ಈವರೆಗೆ 4,210 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ರಾಗಿ 1,540ಕ್ಕೆ 2,530 ಹೆಕ್ಟೇರ್‌ ಹಾಗೂ ಮುಸುಕಿನ ಜೋಳ 850ಕ್ಕೆ 660 ಹೆಕ್ಟೇರ್‌ ಬಿತ್ತನೆಯಾಗಿದೆ. ದ್ವಿದಳ ಧಾನ್ಯ ಬೆಳೆಗಳಾದ ಅಲಸಂದೆ 800ಕ್ಕೆ 820 ಹೆಕ್ಟೇರ್‌, ಹುರುಳಿ 150ಕ್ಕೆ 140, ಅವರೆ 130 ಹೆಕ್ಟೇರ್‌ಗೆ 160 ಹೆಕ್ಟೇರ್‌ ಬಿತ್ತನೆಯಾಗಿದೆ.

ವಾಡಿಕೆಗಿಂತ್ತ ಅಧಿಕ ಮಳೆ: ತಾಲೂಕಿನ ವಾರ್ಷಿಕ ಸರಾಸರಿ ವಾಡಿಕೆ ಮಳೆ 885 ಮಿ.ಮೀ ಆಗಿದೆ. ಪ್ರಸಕ್ತ 2023 ಜನವರಿ 1ರಿಂದ ನವೆಂಬರ್‌ 8ವರೆಗೆ ವಾಡಿಕೆ ಮಳೆ 845.3 ಮಿ.ಮೀ ಬೀಳಬೇಕಾಗಿದ್ದು, ಈವರೆಗೆ 559.2 ಮಿ.ಮೀ ಬಿದ್ದಿದ್ದು ಶೇ.34 ರಷ್ಟು ಕಡಿಮೆ ಮಳೆಯಾಗಿದೆ. ನವೆಂಬರ್‌ ತಿಂಗಳ 1ರಿಂದ 8ರವರೆಗೆ ವಾಡಿಕೆ ಮಳೆ 23.7 ಮಿ.ಮೀ ಆಗಬೇಕಿದ್ದು, ಈವರೆಗೆ 63.2 ಮಿ.ಮೀ ಮಳೆಯಾಗಿದ್ದು, ಶೇ 166 ರಷ್ಟು ಹೆಚ್ಚಿನ ಮಳೆಯಾಗಿದೆ. ನವೆಂಬರ್‌ ಮೊದಲ ವಾರ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ಬಿಸಿಲಿನ ತಾಪದಿಂದ ಒಣಗಿ ಹಾಳಾಗುತ್ತಿದ್ದ ಬೆಳೆಗಳ ಬೆಳವಣಿಗೆಗೆ ಅನುಕೂಲಕರವಾಗಿದೆ.

Advertisement

ಅಂತರ್ಜಲ ವೃದ್ಧಿ: ಮುಂಗಾರು ಕೈಕೊಟ್ಟ ಕಾರಣ ಈ ಸಲ ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯಾಗದೆ ನೀರಿನ ಕೊರತೆ ಉಂಟಾಗಿತ್ತು. ಹೀಗಾಗಿ ನಾಲಾ ವ್ಯಾಪ್ತಿಯ ಜಮೀನಿನಲ್ಲಿ ಕೆಲ ರೈತರು ಅರೆ ನೀರಾವರಿ ಬೆಳೆ ಬೆಳೆದಿದ್ದರು. ಇನ್ನು ಕೆಲ ರೈತರು ನಾಲೆಯಲ್ಲಿ ಹರಿಯುತ್ತಿದ್ದ ನೀರನ್ನು ನಂಬಿ ಭತ್ತದ ನಾಟಿ ಮಾಡಿದ್ದರು. ನೀರಿನ ಕೊರತೆ ನಡುವೆ ರೈತರು ರಾತ್ರಿ ಹೊತ್ತು ಜಮೀನಿಗೆ ತೆರಳಿ ಕಾಯ್ದು ಭತ್ತದ ಗದ್ದೆಗಳಿಗೆ ನೀರು ಹಾಯಿಸುವಂತಾಗಿತ್ತು. ಇದೀಗ ಬೀಳುತ್ತಿರುವ ಮಳೆ ಒಣಗುತ್ತಿದ್ದ ಭತ್ತದ ಬೆಳೆಗೆ ಜೀವ ಸಂಜೀವಿನಿಯಾಗಿದೆ. ಸದ್ಯಕ್ಕೆ ಬರಿದಾಗಿದ್ದ ಕೆರೆ ಕಟ್ಟೆಗಳ ಒಡಲು ತುಂಬುತ್ತಿದ್ದು, ಅಂತರ್ಜಲ ವೃದ್ಧಿಸಿ ಈ ಭಾಗದ ಅಚ್ಚುಕಟ್ಟು ಬೆಳೆಗಳು ಹಸಿರಾಗತೊಡಗಿವೆ.

ಉತ್ತಮ ಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳು: ವರುಣ ಕೃಪೆ ತೋರಿರುವುದರಿಂದ ಸದ್ಯಕ್ಕೆ ಅರಕಲಗೂಡು ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳ ಬೆಳವಣಿಗೆಗೆ ಉತ್ತಮವಾಗಿದೆ. ಮುಖ್ಯವಾಗಿ ಮೆಣಸಿಕನಾಯಿ, ಎಲೆಕೋಸು, ಟೊಮೆಟೋ, ತರಕಾರಿ ಬೆಳೆಗಳು ಚೇತರಿಸಿಕೊಳ್ಳುತ್ತಿವೆ. ತಾಲೂಕಿನಲ್ಲಿ 300 ಹೆಕ್ಟೇರ್‌ ಮೆಣಸಿನಕಾಯಿ ಬಿತ್ತನೆ ಗುರಿ ಹೊಂದಲಾಗಿದ್ದು, 75 ಹೆಕ್ಟೇರ್‌ ಹಾಗೂ ಎಲೆಕೋಸು 180 ಹೆಕ್ಟೇರ್‌ ಗುರಿಗೆ 32 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇತರೆ ಹೂವು, ತರಕಾರಿ ಸೇರಿ ಅಂದಾಜು 300 ಹೆಕ್ಟೇರ್‌ ಬಿತ್ತನೆಯಾಗಿದ್ದು, ಇದೀಗ ಬೀಳುತ್ತಿರುವ ಮಳೆ ಬೆಳೆ ಬೆಳವಣಿಗೆ ಗುರಿ ಸಾಧನೆಗೆ ಪೂರಕವಾಗಿದೆ ಎನ್ನುತ್ತಾರೆ ಅರಕಲಗೂಡು ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜೇಶ್‌.

ತಾಲೂಕಿನಲ್ಲಿ ಅಲಸಂದೆ, ರಾಗಿ ಮತ್ತು ಮುಸುಕಿನ ಜೋಳ ಬೆಳವಣಿಗೆ ಕಾಣುತ್ತಿದ್ದು, ಅವರೆ ಗಿಡಗಳು ಹೂವಿನ ಹಂತದಲ್ಲಿದೆ. ಭತ್ತದ ಬೆಳೆ ಹಾಲುದುಂಬುವ ಹಂತದಲ್ಲಿದೆ. ಮುಂಗಾರು ವಾಡಿಕೆಗಿಂತ ಕಡಿಮೆಯಾಗಿತ್ತು. ನವೆಂಬರ್‌ ಮೊದಲ ವಾರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದ್ದು, ಹಿಂಗಾರು ಬೆಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ● ಕೆ.ಜಿ.ಕವಿತಾ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ಅರಕಲಗೂಡು

ಮುಂಗಾರು ಮಳೆ ಇಲ್ಲದೆ ಬಿತ್ತಿದ್ದ ಬೆಳೆಗಳೆಲ್ಲ ಒಣಗಿ ಹಾಳಾಗಿದ್ದವು. ಹೊಗೆಸೊಪ್ಪು, ಜೋಳ ಇನ್ನಿತರೆ ಬೆಳೆಗಳು ಇಳುವರಿ ಕುಂಠಿತಗೊಂಡು ನಷ್ಟಕ್ಕೀಡಾಗಿದ್ದವು. ಈಗ ಕೆಲ ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಗೆ ಹಿಂಗಾರಿನಲ್ಲಿ ಬಿತ್ತಿದ ರಾಗಿ ಜೋಳ ಮತ್ತಿತರ ಬೆಳೆಗಳು ನಳನಳಿಸುತ್ತಿವೆ. ● ಕುಮಾರ, ರೈತ ರಾಮನಕೊಪ್ಪಲು.

-ವಿಜಯ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next