ತಿರುವನಂತಪುರ: ಕೇರಳದ ತಿರುವನಂತಪುರ ಜಿಲ್ಲೆಯ ಪುಲ್ಲಂಪರಾ ಗ್ರಾಮ ಸಂಪೂರ್ಣ ಡಿಜಿಟಲ್ ಸಾಕ್ಷರತೆ ಸಾಧಿಸಿದ ದೇಶದ ಮೊದಲ ಗ್ರಾಮ ಎಂಬ ಕೀರ್ತಿಗೆ ಪಾತ್ರವಾಗಿದೆ.
ಈ ಬಗ್ಗೆ ವೆಂಜರಮೂಡು ಬಳಿಯ ಮಾಮೂಡುದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅಧಿಕೃತವಾಗಿ ಘೋಷಿಸಿದರು.
“ಸರ್ಕಾರಿ ಸೇವೆಗಳನ್ನು ಪಡೆಯಲು ಸಾರ್ವಜನಿಕರಿಗೆ ಡಿಜಿಟಲ್ ಸಾಕ್ಷರತೆ ಹಾಗೂ ಜಾಗತಿಕ ಜ್ಞಾನ ಜಾಲದೊಂದಿಗೆ ಸಂಪರ್ಕ ಹೊಂದಿರುವುದು ಮುಖ್ಯವಾಗಿದೆ,’ ಎಂದು ಪಿಣರಾಯಿ ವಿಜಯನ್ ಹೇಳಿದರು.
“ಕೇರಳವನ್ನು ಜ್ಞಾನ ಸಮಾಜ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ. ಇದರಿಂದ ಜಗತ್ತಿನ ಯಾವುದೇ ಭಾಗದ ಮಾಹಿತಿ ಪಡೆದು ಅದರ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಆನ್‌ಲೈನ್‌ನಲ್ಲಿ ಕೇರಳ ಸರ್ಕಾರದ 800ಕ್ಕೂ ಹೆಚ್ಚು ಸೇವೆಗಳು ಲಭ್ಯವಿದೆ. ಡಿಜಿಟಲ್ ಸಾಕ್ಷರತಾ ಜನರು ಇದರ ಗರಿಷ್ಠ ಬಳಕೆ ಮಾಡಿಕೊಳ್ಳಬಹುದಾಗಿದೆ. ವಿವಿಧ ಹಂತಗಳಲ್ಲಿ ಡಿಜಿಟಲ್ ಮತ್ತು ಆನ್‌ಲೈನ್ ಫ್ಲಾಟ್‌ಫಾರ್ಮ್ ಗಳ ಮೂಲಕ ಸಂಪರ್ಕ ಸಾಧಿಸಲು ಸರ್ಕಾರ ಪ್ರಯತ್ನಿಸುತ್ತಿದೆ,’ ಎಂದರು.
2021ರ ಆ.15ರಂದು “ಡಿಜಿ ಪುಲ್ಲಂಪರಾ’ ಯೋಜನೆಗೆ ಚಾಲನೆ ನೀಡಲಾಯಿತು. ಐದು ಎಂಜಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು, ಕುಟುಂಬಶ್ರೀ ಘಟಕಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮದ ಪ್ರತಿಯೊಬ್ಬರೂ ಡಿಜಿಟಲ್ ಸಾಕ್ಷರತೆ ಹೊಂದುವ ನಿಟ್ಟಿನಲ್ಲಿ ತರಬೇತಿ ನೀಡಲಾಯಿತು.