ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್ ಹಾಗೂ ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಪುಲಿಗೆರೆ ಉತ್ಸವ ಜ. 3, 4 ಮತ್ತು 5ರಂದು ನಡೆಯಲಿದೆ ಎಂದು ಭಾರತೀಯ ವಿದ್ಯಾಭವನದ ವಿಶೇಷ ಅಧಿಕಾರಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನ ಸಂಚಾಲಕ ಸಿ.ಎಸ್. ಅಶೋಕಕುಮಾರ ತಿಳಿಸಿದರು.
ಶುಕ್ರವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಉತ್ಸವ ಕುರಿತು ಮಾಹಿತಿ ನೀಡಿದ ಅವರು, 5ನೇ ವರ್ಷದ ಪುಲಿಗೆರೆ ಉತ್ಸವ ಮೂರು ದಿನಗಳ ಕಾಲ “ಸಂಗೀತ, ನೃತ್ಯ ಹಾಗೂ ಚಿತ್ರ ಸಂಭ್ರಮ’ ಕಾರ್ಯಕ್ರಮದೊಂದಿಗೆ ಹಬ್ಬದ ರೀತಿಯಲ್ಲಿ ನೆರವೇರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಾಡಿನ ನಾನಾ ಮೂಲೆಗಳ ಪ್ರಸಿದ್ಧ ಸಂಗೀತಕಾರರು, ನೃತ್ಯಪಟುಗಳು, ಚಿತ್ರಕಲಾವಿದರ ಮೂಲಕ ಇಲ್ಲಿನ ಜನರಿಗೆ ಸಂಗೀತ, ಚಿತ್ರ ಸಂಭ್ರಮದ ಸವಿ ಉಣಬಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಉತ್ಸವದ ಮುನ್ನಾದಿನ ಜ. 2ರಂದು ಕಲಾ ಶಿಬಿರ ಶಿವಣ್ಣ ನೆಲವಗಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಸ್ಥಳೀಯ ಕಲಾವಿದರ ಜೊತೆ ಬೆಂಗಳೂರಿನ ವಿಕಲಾಂಗ ಕಲಾವಿದೆ ಅನು ಜೈನ್ ಹಾಗೂ ಧಾರವಾಡದ ವಿಕಲಾಂಗ ಕಲಾವಿದ ಕಿರಣ ಶೇರಖಾನೆ ಕಲಾ ಶಿಬಿರದಲ್ಲಿ ಪಾಲ್ಗೊಳ್ಳುವರು. ಜ. 3ರಂದು ಬೆಳಗ್ಗೆ 6ಕ್ಕೆ ಪುಲಿಗೆರೆ ಉತ್ಸವವನ್ನು ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಣ್ಣ ನೆಲವಿಗಿ ಮಾತನಾಡಿ, ಪುಲಿಗೆರೆ ಉತ್ಸವ ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು.
ಸಮಿತಿ ಕಾರ್ಯದರ್ಶಿ ಪೂರ್ಣಾಜಿ ಖರಾಟೆ, ಎಸ್.ಪಿ. ಪಾಟೀಲ, ಶಂಕರ ಬಾಳಿಕಾಯಿ, ಮಾಲಾದೇವಿ ದಂದರಗಿ, ಗೀತಾ ಮಾನ್ವಿ, ವಿದ್ಯಾಭವದ ಎಚ್.ಎಸ್. ರಾಜಶೇಖರ, ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ನೀಲಪ್ಪ ಕಜೇಕಣ್ಣವರ, ಗಂಗಾಧರ ಮೆಣಸಿನಕಾಯಿ, ರುದ್ರಪ್ಪ ನರೇಗಲ್ ಸೇರಿದಂತೆ ಅನೇಕರು ಇದ್ದರು.